

ಹಳಿಯಾಳ: ಕಬ್ಬಿನ ಬಾಕಿ ಹಣ ಬಿಡುಗಡೆ, ಪ್ರಸ್ತುತ ವರ್ಷದ ಕಬ್ಬಿಗೆ ದರ, ಬೆಂಬಲ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆ. 28ರಂದು ಪಟ್ಟಣದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಪಕ್ಷದ ತಾಲೂಕಾಧ್ಯಕ್ಷ ಗಣಪತಿ ಕರಂಜೇಕರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಸುನೀಲ ಹೆಗಡೆ ಅವರ ನೇತೃತ್ವದಲ್ಲಿ ರೈತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಲಾಗುವುದು. ರೈತರು ಬೆಳೆದ ಬೆಳೆಗಳಿಗೆ ಕಾಡು ಹಂದಿ, ಮಂಗ ಹಾಗೂ ಆನೆಗಳಿಂದ ಆಗುವ ಹಾನಿ ತಡೆಗಟ್ಟುವ ಕುರಿತು ಮತ್ತು ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಅವರಿಂದ ಕಳೆದ ವರ್ಷ ಘೋಷಿತವಾದ ಬಾಕಿ ಹಣ ಬಿಡುಗಡೆ, ತಾಲೂಕನ್ನು ಬರಗಾಲ ಪೀಡಿತವೇಂದು ಘೋಷಿಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಪಟ್ಟಣದ ಶ್ರೀ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರತಿಭಟನಾ ಮೆರವಣಿಗೆಯು ಸಂಗೊಳ್ಳಿ ರಾಯಣ್ಣ ವೃತ್ತ, ಮುಖ್ಯ ಮಾರುಕಟ್ಟೆ ಮಾರ್ಗದ ಮುಖಾಂತರ ಛತ್ರಪತಿ ಶಿವಾಜಿ ವೃತ್ತಕ್ಕೆ ಆಗಮಿಸಿ ಸಭೆ ಸೇರಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.