ಅರ್ಧಕ್ಕೆ ನಿಂತ ಕಾಮಗಾರಿ

2 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ ರಭಸವಾದ ಮಳೆ ಸುರಿದರೆ ಸಾಕು ನಗರದ ಎನ್​ಟಿಟಿಎಫ್ ಬಳಿಯ ರಸ್ತೆಗಳು ಕೆರೆಯಂತಾಗುತ್ತವೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆರಂಭಿಸಿರುವ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕಾಮಗಾರಿಗೆ ಅಗೆದಿರುವ ಗುಂಡಿಗಳು ಅಪಾಯಕ್ಕೆ ಆಹ್ವಾನಿಸುತ್ತಿವೆ. ಸುಮಾರು ಅರ್ಧ ಗಂಟೆ ಮಳೆ ಸುರಿದರೆ ಸಾಕು. ಎನ್​ಟಿಟಿಎಫ್ ರಸ್ತೆಗಳು ಸಂಪೂರ್ಣ ಜಲಾವೃತವಾಗಿ ಮನೆ ಹಾಗೂ ಕಟ್ಟಡದ ಪಾರ್ಕಿಂಗ್ ಸ್ಥಳಗಳಿಗೆ ನೀರು ನುಗ್ಗುತ್ತವೆ. ಬಿಆರ್​ಟಿಎಸ್​ ರಸ್ತೆ ನಿರ್ಮಾಣ ಸಮಯದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಕಲ್ಪಿಸದಿರುವುದೇ ಇದಕ್ಕೆ ಕಾರಣವಾಗಿದೆ. ಇದರಿಂದ ಬೇಸತ್ತ ನಿವಾಸಿಗಳು ಬಿಆರ್​ಟಿಎಸ್​ ಹಾಗೂ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿ ಸುಸ್ತಾಗಿದ್ದರು. ಕೆಲ ತಿಂಗಳ ಹಿಂದೆ ಮೇಯರ್​ ಹಾಗೂ ಬಿಆರ್​ಟಿಎಸ್​ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸಲು ಸೂಚಿಸಿದ್ದರು. ಅದರಂತೆ ರಸ್ತೆ ಎರಡೂ ಬದಿಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಆದರೆ ಒಂದು ಬದಿಯ ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, ಇನ್ನೊಂದು ಬದಿಯ ಕಾಮಗಾರಿ ಅಪೂರ್ಣವಾಗಿದೆ. ಗಟಾರು ಸ್ವಚ್ಛತಾ ಕಾರ್ಯ ಮಾತ್ರ ನಡೆಸಿರುವ ಸಿಬ್ಬಂದಿ, ಸ್ಥಳದಲ್ಲಿ ಕಾಮಗಾರಿ ನಡೆದಿರುವ ಬಗ್ಗೆ ಯಾವುದೇ ಸೂಚನಾ ಫಲಕವೂ ಇಲ್ಲ. ಬರೀ ಬ್ಯಾರಿಕೇಡ್​ ಅಳವಡಿಸಿದ್ದಾರೆ (ಅದೂ ಸರಿಯಾಗಿಲ್ಲ.). ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ವಾಹನ ಸವಾರರು ಕೊಂಚ ಮೈ ಮರೆತರೂ ಅಪಾಯ ತಪ್ಪಿದ್ದಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಅಪೂರ್ಣವಾಗಿರುವ ಸ್ಥಳದಲ್ಲಿ ಪಾಲಿಕೆ ವತಿಯಿಂದ ಆರ್​ಸಿಸಿ ಡ್ರೇನ್​ ನಿರ್ಮಿಸಿದ ಬಳಿಕವೇ ಜಾಲರಿ ಅಳವಡಿಸಿ ಗುಂಡಿ ಮುಚ್ಚಲಿದ್ದಾರೆ. ಪಾಲಿಕೆ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಹೀಗಾಗಿ ತಿಂಗಳಾದರೂ ಗುಂಡಿ ಮುಚ್ಚುವುದು ಅಸಾಧ್ಯ ಎಂಬಂತಾಗಿದೆ. ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ ನೀಡದೆ ತ್ವರಿತವಾಗಿ ಕಾಮಗಾರಿ ನಡೆಸಿ ಜನ ಸಂಚಾರಕ್ಕೆ ಅನುವು ಮಾಡಿಕೊಡಲಿ ಎಂಬುದು ಜನರ ಆಗ್ರಹ.

* ಸಂತೋಷ ಬಡಿಗೇರ, ಬಿಆರ್​ಟಿಎಸ್​ ಇಂಜಿನಿಯರ್​

ರಸ್ತೆಯ ಒಂದು ಬದಿಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇನ್ನೊಂದು ಬದಿಯಲ್ಲಿ ಪಾಲಿಕೆಯಿಂದ ಆರ್​ಸಿಸಿ ಡ್ರೇನ್​ ನಿರ್ಮಾಣ ಮಾಡಿದ ಬಳಿಕ ಜಾಲರಿ ಅಳವಡಿಕೆ ಮಾಡಲಾಗುವುದು. ಇನ್ನು ಕೆಲ ದಿನಗಳಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net