

ಹಿರೇಕೆರೂರ: ಪಟ್ಟಣದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಣಗೊಳ್ಳುತ್ತಿರುವ ಪ್ರವಾಸಿ ಮಂದಿರದ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ವಣಗೊಂಡಿದ್ದ ಪ್ರವಾಸಿ ಮಂದಿರ ಕಾಲಕ್ರಮೇಣ ಶಿಥಿಲಗೊಂಡು ಎಲ್ಲೆಂದರಲ್ಲಿ ಸೋರುತ್ತಿತ್ತು. ಇದನ್ನರಿತ ಅಂದಿನ ಶಾಸಕ ಬಿ.ಸಿ. ಪಾಟೀಲ, ಸರ್ಕ್ಯೂಟ್ ಹೌಸ್ ಮಂಜೂರು ಮಾಡಿಸಿದ್ದರು. ಅದು ನಿರ್ವಣಗೊಂಡು ಈಗ ಕಾರ್ಯನಿರ್ವಹಿಸುತ್ತಿದೆ. ಪಟ್ಟಣ ಬೆಳೆದಂತೆ ಅದರ ಅವಶ್ಯಕತೆಗೆ ತಕ್ಕಂತೆ ಅತ್ಯಾಧುನಿಕ ಸೌಲಭ್ಯ ಒಳಗೊಂಡ ಹೆಚ್ಚಿನ ವಸತಿ ಗೃಹ ನಿರ್ವಿುಸಲು ಯೋಜಿಸಲಾಗಿತ್ತು. ನಂತರ ಕೃಷಿ ಸಚಿವರಾಗಿದ್ದ ಬಿ.ಸಿ. ಪಾಟೀಲ, ಬ್ರಿಟಿಷರ ಕಾಲದ ಎರಡು ಬೃಹತ್ ಕಟ್ಟಡ ತೆರವುಗೊಳಿಸಿ, ಅದೇ ಸ್ಥಳದಲ್ಲಿ ಕೆಳಮಹಡಿಯಲ್ಲಿ 4, ಮೇಲಂತಸ್ತಿನಲ್ಲಿ 2 ಕೊಠಡಿಗಳಿರುವ ಕಟ್ಟಡ ನಿರ್ವಿುಸಲು 3 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದರು.
ಮೇ 31, 2021ರಂದು ಕಾಮಗಾರಿ ಆರಂಭಿಸಲಾಯಿತು. ಅಂದಿನಿಂದ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತ ಕುಂಟುತ್ತ ಸಾಗಿದ ಕಾಮಗಾರಿ, ಅಡಿಪಾಯಕ್ಕಷ್ಟೇ ಸೀಮಿತವಾಯಿತು. ಲೋಕೋಪಯೋಗಿ ಇಲಾಖೆ ಎಇಇ ಪ್ರಕಾಶಗೌಡ ಪಾಟೀಲ ಅವರು ಮುತುವರ್ಜಿ ವಹಿಸಿ, ಗುತ್ತಿಗೆದಾರರಿಂದ ಕಾಮಗಾರಿ ಚುರುಕುಗೊಳಿಸಿ ಕೆಳ ಅಂತಸ್ತಿನ ಕೆಲಸ ಮುಗಿಸಿದರು. ನಂತರ ಅವರ ವರ್ಗಾವಣೆ ಹಾಗೂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿತು.
ನಂತರ ಕಾಮಗಾರಿ ಆರಂಭಗೊಂಡು ಕಟ್ಟಡದ ಮೇಲಂತಸ್ತಿನ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುವಷ್ಟರಲ್ಲಿ ಅನುದಾನ ಕೊರತೆಯ ನೆಪವೊಡ್ಡಿ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈಗಿರುವ ಲೋಕೋಪಯೋಗಿ ಇಲಾಖೆಯ ಎಇಇ, ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.
ಬಸ್ ನಿಲ್ದಾಣದ ಪಕ್ಕದಲ್ಲಿರುವ ಪ್ರವಾಸಿ ಮಂದಿರ ನ್ಯಾಯಾಧೀಶರು, ಉನ್ನತ ಅಧಿಕಾರಿಗಳು, ಗಣ್ಯರು, ನಟರಿಗೆ ಹೀಗೆ ಸಣ್ಣ ಪುಟ್ಟ, ಸಭೆ ಸಮಾರಂಭ, ರಾಜಕೀಯ ಚಟುವಟಿಕೆ, ರೈತ ಸಂಘದವರಿಗೆ ಸೇರಿದಂತೆ ಅನೇಕ ಸಂಘಟನೆಗಳಿಗೆ ವಿವಿಧ ಕಾರ್ಯಗಳಿಗೆ ಬಳಕೆಯಾಗುತ್ತಿತ್ತು. ಪಟ್ಟಣದ ಮಾರ್ಗವಾಗಿ ಶಿರಸಿ, ಜೋಗ, ಕಾರವಾರ, ಮುರುಡೇಶ್ವರ, ಸಾಗರ, ಸಿದ್ದಾಪುರಕ್ಕೆ ಮತ್ತು ಪ್ರವಾಸಿ ತಾಣಗಳಿಗೆ ಹಿರೇಕೆರೂರ ಮಾರ್ಗವಾಗಿ ತೆರಳುವವರು ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು ಮುಂದೆ ಹೋಗುತ್ತಾರೆ. ಈಗಿರುವ ಸರ್ಕ್ಯೂಟ್ ಹೌಸ್ನಲ್ಲಿ ಕೊಠಡಿಗಳು ಕಡಿಮೆ ಇರುವುದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ.
ಈಗಂತೂ ಪ್ರವಾಸಿ ಮಂದಿರದ ಅಗತ್ಯತೆ ಹೆಚ್ಚಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣಗೊಳಿಸಿ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲ ಒತ್ತಾಯವಾಗಿದೆ.
ಪಟ್ಟಣದ ಹೃದಯಭಾಗದಲ್ಲಿರುವ ಪ್ರವಾಸಿ ಮಂದಿರ ಎಲ್ಲರಿಗೂ ಉಪಯುಕ್ತವಾಗಿದೆ. ಹೊಸ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳಾಗಿವೆ. ಕಾಮಗಾರಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ಮೇಲಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಬೇಕಿದೆ. | ಉಮೇಶ ಬಣಕಾರ, ಸ್ಥಳೀಯ ನಿವಾಸಿ ರಾಜ್ಯಾದ್ಯಂತ ನಿರ್ವಣಗೊಳ್ಳುತ್ತಿರುವ ಪ್ರವಾಸಿ ಮಂದಿರಗಳ ಕಾಮಗಾರಿಗೆ ಅನುದಾನದ ಕೊರತೆಯಿದೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಗುತ್ತಿಗೆದಾರರೊಂದಿಗೆ ಮಾತನಾಡಿದ್ದೇನೆ. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಹಾವೇರಿಯಲ್ಲಿ ಈ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದಿದ್ದು, ಗಂಭೀರ ಚರ್ಚೆ ನಡೆದಿದೆ. | ಮಾಲತೇಶ ಕಲ್ಲಮ್ಮನವರ, ಪಿಡಬ್ಲೂಡಿ ಎಇಇ