ಅರ್ಧದಷ್ಟೂ ಆಗದ ಬಿತ್ತನೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಭಾವಕ್ಕೆ ಗುರಿ ಸಾಧನೆಯಲ್ಲಿ ಹಿನ್ನಡೆಯಾಗಿದೆ.
Male Abhavadindagi Chikkaballapuradalli Bittane Ardhadashtu Aagilla
Published on


ಮುಂಗಾರು ಮಳೆಯ ಅಭಾವಕ್ಕೆ ಗುರಿ ಸಾಧನೆಯಲ್ಲಿ ಹಿನ್ನಡೆ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಭಾವ ಕಾಡುತ್ತಿದ್ದು, ಬಿತ್ತನೆಯ ಗುರಿ ಪೈಕಿ ಅರ್ಧದಷ್ಟು ಸಾಧನೆಯಾಗಿಲ್ಲ. ಇಲ್ಲಿಯವರೆಗೂ ಶೇ.37.75 ರಷ್ಟು ಮಾತ್ರ ಬಿತ್ತನೆಯಾಗಿದೆ.
ಕಳೆದ ಜೂನ್​ನ 64.1 ವಾಡಿಕೆ ಮಳೆಗೆ 53.4 ಮಿ.ಮೀ ಮಳೆಯೊಂದಿಗೆ ಶೇ.16.7ರಷ್ಟು, ಜುಲೈನಲ್ಲಿ 64.1 ವಾಡಿಕೆ ಮಳೆಗೆ 64.1 ಮಿ.ಮೀ ಮಳೆಯೊಂದಿಗೆ ಶೇ.28.5ರಷ್ಟು ಕೊರತೆಯಾಗಿದೆ. ಇದರ ನಡುವೆ ಈ ಬಾರಿ ಮುಂಗಾರಿಗೆ 1,48,592 ಹೆಕ್ಟೇರ್​ ಪ್ರದೇಶದಲ್ಲಿನ ಬಿತ್ತನೆ ಗುರಿ ಪೈಕಿ 56097 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ 10,072 ನೀರಾವರಿಯ ಹೆಕ್ಟೇರ್​ ಪ್ರದೇಶದ ಪೈಕಿ 2910, 1,38,520 ಖುಷ್ಕಿ ಹೆಕ್ಟೇರ್​ ಪ್ರದೇಶದ ಪೈಕಿ 49,247 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಗುರಿ ಸಾಧನೆಯಲ್ಲಿ ಹಿನ್ನಡೆ:
ಸಮರ್ಪಕವಾಗಿ ಜಿಲ್ಲೆಯಲ್ಲಿ ಮಳೆ ಬೀಳುತ್ತಿಲ್ಲ. ಆಗಾಗ ತುಂತುರು ಹನಿಗಳ ಸಿಂಚನವಾಗುತ್ತಿದೆ. ಅದು ಮಳೆ ಬಂದಂತೆ ಹಾಗೆಯೇ ನಿಂತು ಹೋಗುತ್ತಿದ್ದು, ಕಳೆದ ಎರಡು ತಿಂಗಳಿಂದಲೂ ವಾಡಿಕೆ ಮಳೆಗಿಂತಲೂ ಕೊರತೆ ಕಂಡು ಬರುತ್ತಿದೆ. ಈಗಾಗಲೇ ನಿರೀಕ್ಷೆಗೆ ಅನುಗುಣವಾಗಿ ನೆಲಗಡಲೆ, ಅಲಸಂಧೆ, ಅವರೆ ಬೆಳೆಯ ಗುರಿ ಸಾಧನೆಯಾಗಿಲ್ಲ. ವರುಣರಾಯನ ಚೆಲ್ಲಾಟಕ್ಕೆ ನಿರೀಕ್ಷೆಯ ಲಾಭದ ಬೆಳೆಗಳನ್ನು ಬೆಳೆಯಲು ರೈತರಿಗೆ ತೊಡಕಾಗಿದ್ದು, ಇದಕ್ಕೆ ಪ್ರಸ್ತುತ ರಾಗಿ, ಮೆಕ್ಕೆಜೋಳ ಸೇರಿ ಇತರ ಬೆಳೆಗಳನ್ನು ಬೆಳೆಯಬೇಕಾಗಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಮಳೆ ಬೀಳದಿದ್ದಲ್ಲಿ ನಿರೀಕ್ಷೆಯ ಬಿತ್ತನೆಯ ಗುರಿಯು ಮತ್ತಷ್ಟು ಇಳಿಮುಖವಾಗುವ ಸಾಧ್ಯತೆ ಇದೆ. ಇನ್ನು ಮುಂಗಾರಿನಲ್ಲಿ ವಿವಿಧ ಬೆಳೆಗಳ ಇಳುವರಿಯಿಲ್ಲದೇ ಉತ್ಪನ್ನಗಳ ಬೇಡಿಕೆ ಮತ್ತು ದರ ಹೆಚ್ಚಾಗಲಿದೆ ಎಂಬ ಲೆಕ್ಕಾಚಾರದ ಮಾತುಗಳು ಈಗಲೇ ಕೇಳಿ ಬಂದಿವೆ.

ಮಳೆಯ ಅಭಾವಕ್ಕೆ ಕುಸಿತ:
ಜಿಲ್ಲೆಯಲ್ಲಿ ಏಕದಳ ಧಾನ್ಯ 1,02,003, ದ್ವಿದಳ ಧಾನ್ಯ 18,700, ಎಣ್ಣೆಕಾಳು 27,677 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಜೂನ್​ನಿಂದ ಮುಂಗಾರು ಅವಧಿ ಪ್ರಾರಂಭವಾಗಿದ್ದು, ಇದರ ನಡುವೆ ಇಲ್ಲಿಯವರೆಗೂ ಹೈಮುಸುಕಿನ ಜೋಳ 50450 ಹೆಕ್ಟೇರ್​ ಪ್ರದೇಶದ ಪೈಕಿ 25,153, ರಾಗಿ 48 ಸಾವಿರ ಹೆಕ್ಟೇರ್​ ಪ್ರದೇಶದ ಪೈಕಿ 15,655 ಹೆ.ಪ್ರ. ದೇಶದಲ್ಲಿ ಬಿತ್ತನೆ ಸೇರಿದಂತೆ ಏಕದಳ ಧಾನ್ಯ ಪೈಕಿ ಶೇ.41.59 ರಷ್ಟು ಬಿತ್ತನೆ ಸಾಧನೆ ಕಂಡು ಬಂದಿದೆ. ಭತ್ತ 2900ಕ್ಕೆ 290, ತೊಗರಿ 11400ಕ್ಕೆ 2080, ಅವರೆ 5 ಸಾವಿರಕ್ಕೆ 1282, ನೆಲಗಡಲೆ 27142 ಕ್ಕೆ 9500 ಹೆ.ಪ್ರದೇಶದಲ್ಲಿ ಬಿತ್ತನೆಯ ಸಾಧನೆಯೊಂದಿಗೆ ಹಿನ್ನಡೆ ಕಂಡು ಬಂದಿದೆ.

ಬೆಳೆ ಗುರಿ ಸಾಧನೆ ಶೇಕಡವಾರು
ಏಕದಳ ಧಾನ್ಯ 102003 42426 41.59
ದ್ವಿದಳ ಧಾನ್ಯ 18700 3940 21.07
ಎಣ್ಣೆಕಾಳು 27677 9601 34.69
ವಾಣಿಜ್ಯ ಬೆಳೆಗಳು 212 130 61.32

ತಾಲೂಕು ಜೂನ್​ ಜುಲೈ (ಜು.24ರ ಅಂತ್ಯಕ್ಕೆ)
ಬಾಗೇಪಲ್ಲಿ 49.7 (59.3) 34.4(60.1)
ಚಿಕ್ಕಬಳ್ಳಾಪುರ 56.3(74.5) 65 (80.6)
ಚಿಂತಾಮಣಿ 64.6 (60.1) 41.6 (58)
ಗೌರಿಬಿದನೂರು 44.6 (65.7) 43.8(66.3)
ಗುಡಿಬಂಡೆ 65.5 (62.8) 45.9 (71)
ಶಿಡ್ಲಟ್ಟ 48.3 (67.7) 50.9 (60.3)

ಕೋಟ್​
ಮಳೆಗೆ ಕೊರತೆಗೆ ಕೃಷಿ ಬೆಳೆಗಳ ಬಿತ್ತನೆಗೆ ತೊಡಕಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾದಲ್ಲಿ ಕೊರತೆಯಾಗಿರುವ ಬಿತ್ತನೆ ಪ್ರಮಾಣವನ್ನು ಆಗಸ್ಟ್​ನಲ್ಲಿ ರೈತರು ಸರಿದೂಗಿಸುತ್ತಾರೆ. ಈಗಲೂ ಶೇ.90ಕ್ಕಿಂತ ಹೆಚ್ಚಿನ ಪ್ರಮಾಣದ ಬಿತ್ತನೆಯ ನಿರೀಕ್ಷೆಯನ್ನು ಹೊಂದಲಾಗಿದೆ.

ಜಾವೀದ್​ ಬೇಗಂ ಖಾನ್​, ಜಂಟಿ ಕೃಷಿ ನಿರ್ದೇಶಕಿ, ಚಿಕ್ಕಬಳ್ಳಾಪುರ

ಮುಂಗಾರು ಅವಧಿಯ ಪ್ರಾರಂಭದಿಂದಲೂ ಮಳೆಯ ಅಭಾವ ಕಂಡು ಬರುತ್ತಿದೆ. ನೆಲಗಡಲೆ, ಅವರೆ ಸೇರಿದಂತೆ ಹಲವು ಬೆಳೆಗಳ ಅವಧಿ ಮುಗಿದಿದ್ದು ಕಡಿಮೆ ಬಿತ್ತನೆ ಸಾಧನೆಗೆ ಇಳುವರಿ ಕುಸಿತ ಕಾಣಲಿದೆ.

ನಾಗರಾಜ್​, ಕೃಷಿಕ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net