

ರಾಯಚೂರು ರಾಜ್ಯದಲ್ಲಿ ಮಾದಿಗ ಸಮುದಾಯಕ್ಕೆ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಖಂಡಿಸಿ ಒಳ ಮೀಸಲಾತಿ ಐಕ್ಯ ಸಮಿತಿ ಮುಖಂಡರು ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಹತ್ತಿರದಲ್ಲಿ ಅರೆಬೆತ್ತಲೆಯಾಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಸಂಚಾಲಕ ಎಂ.ವಿರುಪಾಕ್ಷಿ ಮಾತನಾಡಿ, ಸುಪ್ರಿಂ ಕೋರ್ಟ್ ಒಳ ಮೀಸಲಾತಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿದೆ. ತೆಲಂಗಾಣ, ಆಂಧ್ರ, ಹರಿಯಾಣ ಸರ್ಕಾರಗಳು ಜಾರಿಗೆ ತಂದಿವೆ. ಆದರೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಇನ್ನು ವಾಗ್ದಾನ ಮಾತ್ರ ನೀಡಿ ಕಾಲಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂತರಾಜು ಹಾಗೂ ಸದಾಶಿವ ಆಯೋಗದ ವರದಿಗಳನ್ನು ಪರಿಗಣಿಸಿ ಸರ್ಕಾರಕ್ಕೆ ಸಲಹೆ ನೀಡಿದ್ದರೂ, ಬೇರೆ ಆಯೋಗ ರಚಿಸಿ ಮತ್ತೆ ವಿಳಂಬ ಮಾಡಲಾಗಿದೆ. ಈ ಹೋರಾಟ ಈ ಅಂತಿಮ ಅ ಘಟ್ಟದಲ್ಲಿದ್ದು, ಈ ಹೋರಾಟಕ್ಕೆ ಸರ್ಕಾರ ಮಣಿಯದಿದ್ದರೆ ರಾಜ್ಯ ಮಟ್ಟದಲ್ಲಿ ಸರ್ಕಾರ ಇಂದೆಂದೂ ಕಾಣದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಳ ಮೀಸಲಾತಿಗೆ ಇನ್ನು 15 ದಿನಗಳೊಳಗೆ ಜಾರಿ ಆದೇಶ ನೀಡದಿದ್ದರೆ ಬೆಂಗಳೂರು ಮುತ್ತಿಗೆ ಹಾಕಲಾಗುವುದು. ಮುಂದಿನ ದಿನಗಳಲ್ಲಿ ಹೋರಾಟ ಸಮಿತಿಯು 25 ಲಕ್ಷ ಮಾದಿಗ ಶಕ್ತಿ ತೋರಿಸಲು ಮುಂದಾಗಲಿದೆ. ಸರ್ಕಾರದ ಕುರುಡುತನ, ನಾಯಕರೆನಿಸಿಕೊಂಡವರ ಮೌನತೆಯೇ ನಮ್ಮನ್ನು ಆಕ್ರೋಶಗೊಳ್ಳುವಂತೆ ಮಾಡುತ್ತಿದೆ. ಮಾದಿಗ ಶಕ್ತಿಯನ್ನು ಲಘುವಾಗಿ ತೆಗೆದುಕೊಳ್ಳಬಾರದು ಹದಿನೈದು ದಿನದೊಳಗೆ ಒಳಮೀಸಲಾತಿಯನ್ನು ಜಾರಿಗೊಳಿಸುವಂತೆ ಎಚ್ಚರಿಸಿದರು.
ಪ್ರತಿಭಟನೆ ನಿಮಿತ್ತ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಯಿತು.ಜತೆಗೆ ಬಸವೇಶ್ವರ ವೃತ್ತ, ರೈಲು ನಿಲ್ದಾಣ ವೃತ್ತ, ಕೇಂದ್ರ ಬಸ್ ನಿಲ್ದಾಣ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸೇರಿದ್ದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದ ಸವಾರರು ಕೆಲಕಾಲ ಪರದಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆ.ಬಿ. ರಾಜು, ರವೀಂದ್ರ ಜಲ್ದಾರ್, ರಾಮಣ್ಣ, ತಿಮ್ಮಪ್ಪ ಪಿರಂಗಿ, ಪಿ.ಎಲ್ಲಪ್ಪ, ಜೆ.ತಿಮ್ಮಪ್ಪ, ಶಂಶಾಲಂ, ಎಸ್.ರಾಜು, ಈರಣ್ಣ ಭಂಡಾರಿ, ಚಂದ್ರು ಭಂಡಾರಿ, ಎಂ.ಕೆ.ನಾಗರಾಜ, ಸತ್ಯನಾಥ, ಭೀಮಣ್ಣ ಮಂಚಾಲ, ಅನೀಲ್ ಕುಮಾರ, ರಂಜಿತ್ ದಂಡೋರಾ, ದುಳ್ಳಯ್ಯ ಗುಂಜಳ್ಳಿ, ಮಾನಪ್ಪ ಮೇಸ್ತ್ರಿ, ನರಸಪ್ಪ ಆಶಾಪೂರ, ಆಂಜನೇಯ್ಯ ಕುರುಬದೊಡ್ಡಿ ಸೇರಿ ಅನೇಕರು ಇದ್ದರು.