

ಕಾನಹೊಸಹಳ್ಳಿ: ಒಂದೂವರೆ ದಶಕದ ಬಳಿಕ ಹುಲಿಕೆರೆ ಗ್ರಾಮದ ಕೆರೆಗೆ ಮಳೆ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶುಕ್ರವಾರ ಅದ್ದೂರಿ ಮೆರವಣಿಗೆಯೊಂದಿಗೆ ತೆರಳಿ ಗಂಗೆಮಾತೆಗೆ ಪೂಜೆ ಸಲ್ಲಿಸಿದರು.
ಹುಲಿಕೆರೆ ಕೆರೆ ಪ್ರಾಚೀನ ಕಾಲದ್ದಾಗಿದೆ. ಕೆರೆ ದಂಡೆ ಹಿಂಭಾಗದ ಚಾಲುಕ್ಯರ ಕಾಲದ ಐತಿಹಾಸಿಕ ತ್ರಿಕೂಟ ವಿನ್ಯಾಸದ ಶ್ರೀ ಕಲ್ಲೇಶ್ವರ ದೇವಾಲಯವಿದೆ. ಸುತ್ತಲಿನ ಹತ್ತಾರು ಹಳ್ಳಿಗಳ ಜನರ ಪಾಲಿಗೆ ಜೀವನಾಡಿಯಾಗಿದೆ. ಆದರೆ, ಕಳೆದ 15 ವರ್ಷಗಳಿಂದ ಕೆರೆಗೆ ಹನಿ ನೀರು ಹರಿದು ಬಂದಿರಲಿಲ್ಲ. ಆದರೆ, ಇತ್ತೀಚೆಗೆ ನಾಲ್ಕೈದು ದಿನ ಸುರಿದ ಉತ್ತಮ ಮಳೆಯಿಂದಾಗಿ ಅರ್ಧಕೆರೆ ತುಂಬಿದೆ.
ಇದರಿಂದ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಶುಕ್ರವಾರ ಗ್ರಾಮದ ಮುಖಂಡರು, ದೈವಸ್ಥರು, ಜನಪ್ರತಿನಿಧಿಗಳು ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಕಳಶ ಹಾಗೂ ಪೂರ್ಣಕುಂಭದೊಂದಿಗೆ ಪಾಲ್ಗೊಂಡಿದ್ದರು.
ಗ್ರಾಮದ ಪ್ರಮುಖ ಮಠದ ವೀರೇಶಸ್ವಾಮಿ ಮಾತನಾಡಿ, ಹಲವು ವರ್ಷಗಳ ನಂತರ ಕೆರೆಗೆ ನೀರು ಹರಿದು ಬಂದಿರುವುದು ಖುಷಿಯಾಗಿದೆ. ಹೀಗಾಗಿ ಗಂಗೆ ಪೂಜೆ ಮಾಡಿದ್ದೇವೆ. ಮತ್ತೆ ಮಳೆಬಂದು ಕೆರೆ ಭರ್ತಿಯಾದರೆ ಬಾಗಿನ ಅರ್ಪಿಸಲಾಗುವುದು ಎಂದರು.