

ತುಮಕೂರು: ಜಿಲ್ಲೆಯಲ್ಲಿ ಶನಿವಾರ 4 ಕರೊನಾ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 50ಕ್ಕೇರಿದೆ. ತುಮಕೂರು ತಾಲೂಕಿನ ಬೈರಸಂದ್ರದ 26 ವರ್ಷದ ಯುವಕನಿಗೆ ಸೋಂಕು ದೃಢವಾಗಿದೆ, ಪ್ರಯಾಣದ ಹಿನ್ನೆಲೆ ಇಲ್ಲದಿರುವ ಯುವಕ ದಾಬಸ್‌ಪೇಟೆಯಲ್ಲಿ ಕೆಲಸ ಮಾಡುತ್ತಿದ್ದ. ಹಾಗಾಗಿ, ಗ್ರಾಮವನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.
ಜೂ.4ರಂದು ಇಟಲಿಯಿಂದ ವಾಪಸಾಗಿದ್ದ ಬಡ್ಡಿಹಳ್ಳಿಯ 24 ವರ್ಷದ ಯುವಕ ದೆಹಲಿಯಲ್ಲಿ ಕ್ವಾರಂಟೈನ್ ಮುಗಿಸಿ ತುಮಕೂರಿಗೆ ಜೂ.12ರಂದು ತಲುಪಿದ್ದ. ಈತನ ಗಂಟಲ ದ್ರವವನ್ನು ಜೂ.19ರಂದು ಪಡೆದಿದ್ದು ಶನಿವಾರ ಫಲಿತಾಂಶ ಬಂದಿದೆ. ನೆಲಮಂಗಲ ತಾಲೂಕು ಟಿ.ಬೇಗೂರಿನಲ್ಲಿ ಸೋಂಕು ದೃಢಪಟ್ಟಿರುವ ಅಳಿಯನ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ತುಮಕೂರು ಸಿದ್ಧಗಂಗಾ ಮಠದ ಸಮೀಪದ ಗೌಡಯ್ಯನಪಾಳ್ಯದ 52 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.ಟ್ರಾವಲ್ ಹಿಸ್ಟರಿ ಇಲ್ಲದ ತಿಪಟೂರಿನ 65 ವರ್ಷದ ವೃದ್ಧೆಗೆ ಸೋಂಕು ತಗುಲಿದೆ.
ಸೋಂಕು ದೃಢಪಟ್ಟಿರುವ ಗ್ರಾಮಗಳಲ್ಲಿ ಸೋಂಕಿತರಿದ್ದ ಮನೆಯ 100ಮೀ ವ್ಯಾಪ್ತಿಯನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಿದ್ದು ಸರ್ವೇ ಆರಂಭಿಸಲಾಗಿದೆ. ಸಿದ್ಧಗಂಗಾ ಮಠದಲ್ಲಿ ಮೂಡಿದ್ದ ಆತಂಕದ ಕಾರ್ಮೋಡ ಸರಿದಿದೆ. ಆಂಧ್ರ ಪ್ರದೇಶದ ಕರ್ನೂಲ್ ಮೂಲದ ವಿದ್ಯಾರ್ಥಿಗೆ ಪಾಸಿಟಿವ್ ಇರುವುದಾಗಿ ಕರ್ನೂಲ್ ಜಿಲ್ಲಾಡಳಿತದ ಮಾಹಿತಿ ಹಿನ್ನೆಲೆಯಲ್ಲಿ ಶುಕ್ರವಾರ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಶನಿವಾರ ವರದಿಯಲ್ಲಿ ನೆಗಟಿವ್ ಬಂದಿದೆ. ಜಿಲ್ಲಾಡಳಿತ, ಮಠದ ಆಡಳಿತ ಮಂಡಳಿ ನಿಟ್ಟುಸಿರುಬಿಟ್ಟಿದೆ.
ಮಠದ ವಿದ್ಯಾರ್ಥಿಗೆ ಕರೊನಾ ನೆಗೆಟಿವ್: ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ ಸೋಂಕು ದೃಢವಾಗಿರುವ ಬಗ್ಗೆ ಆಂಧ್ರ ಸರ್ಕಾರ ನೀಡಿದ್ದ ವರದಿ ಹಿನ್ನೆಲೆಯಲ್ಲಿ ಆತನ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ‘ವಿಜಯವಾಣಿ’ಗೆ ತಿಳಿಸಿದರು. ಮಠದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ 120 ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿರುವುದು ಆತಂಕ ನಿವಾರಿಸಿದೆ.
ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್: ಮಠಕ್ಕೆ ಬರುವ ಮುನ್ನ ಜೂ.13 ರಂದು ವಿದ್ಯಾರ್ಥಿಯ ಗಂಟಲುದ್ರವ ಮಾದರಿ ಸಂಗ್ರಹಿಸಲಾಗಿತ್ತು. ವರದಿ ಬರುವ ಮೊದಲೇ ಜೂ.15ರಂದು ಆತ ಮಠಕ್ಕೆ ಬಂದಿದ್ದ. ಆದರೆ ಸೋಂಕು ಇರುವುದಾಗಿ ಕರ್ನೂಲ್ ಜಿಲ್ಲಾಡಳಿತ ಮಾಹಿತಿ ನೀಡಿತ್ತು. ತಕ್ಷಣವೇ ಕ್ವಾರಂಟೈನ್‌ನಲ್ಲಿದ್ದ ವಿದ್ಯಾರ್ಥಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆತನ ಜತೆ ಕೊಠಡಿಯಲ್ಲಿ ಮೂವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಿ ಗಂಟಲುದ್ರವ ಸಂಗ್ರಹಿಸಲಾಗಿತ್ತು. ಇನ್ನು ಆತನ ಜತೆಯಲ್ಲಿದ್ದ ಮೂವರಿಗೂ ನೆಗಟಿವ್ ಬಂದಿದೆ. ಜೂ.25 ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಎಲ್ಲರನ್ನೂ ಮಠಕ್ಕೆ ಕಳುಹಿಸಿಕೊಡಲಾಗಿದೆ.
ಶ್ರೀಮಠದ ವಿದ್ಯಾರ್ಥಿಗೆ ಕರೊನಾ ನೆಗೆಟಿವ್ ಬಂದಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ಮುತುವರ್ಜಿ ವಹಿಸಿ ಎಲ್ಲ ಮಕ್ಕಳನ್ನು ಕರೊನಾ ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲರಿಗೂ ನೆಗೆಟಿವ್ ಬಂದಿದೆ. ಎಲ್ಲ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಪಾಲಕರು ಗಾಬರಿಗೊಳ್ಳಬೇಕಿಲ್ಲ. ಎಸ್ಸೆಸ್ಸೆಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಲು ವೈಯಕ್ತಿಕವಾಗಿ ಶುಚಿತ್ವದ ಜತೆಗೆ ಮಾಸ್ಕ್ ಧರಿಸುವುದು ಕಡ್ಡಾಯ. ಶ್ರೀ ಸಿದ್ದಲಿಂಗ ಶ್ರೀಗಳು ಮಠಾಧ್ಯಕ್ಷರು