ಹಳೆಗೇಟು ಸರ್ವೀಸ್ ರಸ್ತೆ ಕೆಸರುಮಯ : ಹೊಂಡ-ಗುಂಡಿಗಳಿಂದ ಜನರಿಗೆ ಸಮಸ್ಯೆ : ಚರಂಡಿ ಬದಿಗೆ ಮಣ್ಣು ತುಂಬಿಸುವ ಕಾರ್ಯ

New Project (8)
Published on

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಭಾಗವಾಗಿ ಹಳೆಗೇಟು ಎಂಬಲ್ಲಿ ಸರ್ವೀಸ್ ರಸ್ತೆ ಬದಿ ನಿರ್ಮಿಸಲಾದ ಚರಂಡಿಯ ಬದಿಗೆ ಮಣ್ಣು ತುಂಬಿಸಿರುವುದರಿಂದ ಮಳೆಗೆ ಮಣ್ಣೆಲ್ಲಾ ಕರಗಿ ರಸ್ತೆಯಿಡೀ ಕೆಸರು ಗದ್ದೆಯುಂಟಾಗಿ ವಾಹನ ಸವಾರರು ಸಂಕಷ ್ಟಪಡುವ ಸ್ಥಿತಿ ನಿರ್ಮಾಣವಾಗಿದೆ.

ಉಪ್ಪಿನಂಗಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಮಳೆಯನ್ನು ಲೆಕ್ಕಿಸದೆ ಮುಂದುವರಿದಿದ್ದು, ಕೆಲವು ಪ್ರದೇಶಗಳಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಕೂಟೇಲು ಬಳಿಯಿಂದ ಮಠದವರೆಗಿನ ಎತ್ತರಿಸಲ್ಪಟ್ಟ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಳೆಗೇಟುವಿನಲ್ಲಿ ತಿರುವು ಪಡೆದು ಕಡಬ ಕಡೆಗೆ ಸಂಚರಿಸಬೇಕಾದರೆ ವಾಹನ ಎತ್ತರಿಸಲ್ಪಟ್ಟ ರಸ್ತೆಯ ಎರಡೂ ಬದಿಯಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಸಾಗಬೇಕು. ಇಲ್ಲಿ ಒಂದು ಬದಿಯ ಸರ್ವೀಸ್ ರಸ್ತೆಯ ಕಾಮಗಾರಿ ಶೇ.75 ಮುಗಿದಿದ್ದು, ಉಳಿದ ಕಡೆ ರಸ್ತೆ ನಿರ್ಮಾಣವಾಗಬೇಕಿದೆ. ಇನ್ನೊಂದು ಬದಿಯ ಸರ್ವೀಸ್ ರಸ್ತೆ ಸಂಪೂರ್ಣ ಹದಗೆಟ್ಟು ಹೊಂಡ-ಗುಂಡಿಗಳಿಂದ ಕೂಡಿದೆ. ಇಲ್ಲಿ ಇನ್ನಷ್ಟೇ ಹೊಸ ರಸ್ತೆ ನಿರ್ಮಾಣವಾಗಬೇಕಿದೆ.

ವಾಹನ ಸವಾರರಿಗೆ ಸಂಕಷ್ಟ

ಮೊದಲೇ ಹೊಂಡ-ಗುಂಡಿಗಳಿಂದ ಕೂಡಿರುವ ಈ ರಸ್ತೆ ಬದಿಯಲ್ಲಿ ನಿರ್ಮಿಸಿರುವ ಚರಂಡಿಗೆ ಎರಡು ಮೂರು ದಿನಗಳಿಂದ ಬದಿ ಮಣ್ಣು ತುಂಬಿಸುವ ಕಾರ್ಯ ಮಾಡಲಾಗಿದೆ. ಮಣ್ಣನ್ನು ರಸ್ತೆಯಲ್ಲೇ ತಂದು ರಾಶಿ ಹಾಕಿ ಹಿಟಾಚಿ ಮೂಲಕ ಚರಂಡಿ ಬದಿಗೆ ತುಂಬಿಸಲಾಗುತ್ತಿದೆ. ಈಗ ಮಳೆಗಾಲದ ಸಮಯವಾಗಿದ್ದರಿಂದ ಮಣ್ಣೆಲ್ಲಾ ಕರಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಇನ್ನೊಂದು ಕಡೆಯಿಂದ ಹೊಂಡ-ಗುಂಡಿಗಳಿಂದಾಗಿ ಇಲ್ಲಿ ಸಂಚರಿಸುವ ವಾಹನ ಸವಾರರು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.

ಸರ್ವೀಸ್ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ. ಸೂಕ್ಷ್ಮ ಕಾಮಗಾರಿ ವೇಳೆ ವಾಹನ ಸವಾರರ ಸುರಕ್ಷತೆಗಾಗಿ ಬಹುತೇಕ ಪೂರ್ಣತೆಯನ್ನು ಕಂಡ ಸರ್ವೀಸ್ ರಸ್ತೆಯನ್ನು ಸಂಚಾರಕ್ಕೆ ಒಂದೆರಡು ತಾಸು ನಿರ್ಬಂಧಿಸಲಾಗುತ್ತಿದೆ. ಈ ವೇಳೆ ವಾಹನ ಸವಾರರು ಇನ್ನೊಂದು ಪಾರ್ಶ್ವದ ಕಾಮಗಾರಿ ಪ್ರಗತಿಯಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿದ ಕಾರಣ ಕೆಸರು ತುಂಬಿದ ರಸ್ತೆಯ ಆರೋಪ ಬಂದಿದೆಯೇ ಹೊರತು ಇದು ಸರ್ವಕಾಲಿಕ ಸಮಸ್ಯೆಯಲ್ಲ. ರಘುನಾಥ ರೆಡ್ಡಿ ಹೆದ್ದಾರಿ ಕಾಮಗಾರಿನಿರತ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net