

ಮಂಡ್ಯ: ತಾಲೂಕಿನ ಹಳೇಬೂದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಬಿ.ಮಹೇಶ್ ಹಾಗೂ ಉಪಾಧ್ಯಕ್ಷೆಯಾಗಿ ಬಿ.ಸಿ.ಪ್ರತಿಮಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಬಿ.ಮಹೇಶ್ ಹಾಗೂ ಉಪಾಧ್ಯಕ್ಷರಾಗಿ ಬಿ.ಸಿ.ಪ್ರತಿಮಾ ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು. ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಎನ್.ಎಲ್.ರವಿ ಹಾಗೂ ಸಂಘದ ಕಾರ್ಯದರ್ಶಿ ಡಿ.ಸುರೇಶ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷ ಮಹೇಶ್ ಮಾತನಾಡಿ, ಸಂಘದ ಅಭಿವೃದ್ಧಿಗೆ ನಿರ್ದೇಶಕರು, ಷೇರುದಾರರ ಸಹಕಾರದಿಂದ ಶ್ರಮಿಸುವುದಾಗಿ ಹೇಳಿದರು.
ಸೊಸೈಟಿಯ ವರಿಷ್ಠರನ್ನು ನಿರ್ದೇಶಕರಾದ ಸ್ವಾಮಿ, ಲೋಕೇಶ್, ದಿನೇಶ್, ಸಂಜಯಕುಮಾರ್, ಯಶೋಧ, ಶೈಲೇಂದ್ರ ಕುಮಾರ್ ಅಭಿನಂದಿಸಿದರು.