ಮುಂದಿನ ವರ್ಷ ಬೂದನೂರು ಉತ್ಸವ: ಸುಳಿವು ಕೊಟ್ಟ ಶಾಸಕರು

Halebudanoor Swachatha Andolana
Published on

ಮಂಡ್ಯ: ಹೊಸಬೂದನೂರು ಮತ್ತು ಹಳೇಬೂದನೂರು ಗ್ರಾಮಗಳ ಮಧ್ಯೆವಿರುವ ಕೆರೆ ಜತೆಗೆ ಹೊಸಬೂದನೂರು ಗ್ರಾಮದ ಅನಂತ ಪದ್ಮನಾಭಸ್ವಾಮಿ ಹಾಗೂ ಕಾಶಿವಿಶ್ವನಾಥ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಿ 2024ಕ್ಕೆ ಬೂದನೂರು ಉತ್ಸವ ಆಚರಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ತಾಲೂಕಿನ ಹಳೇಬೂದನೂರು ಗ್ರಾಮದಲ್ಲಿ ಸರ್ಕಾರಿ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾಜಿ ಸಚಿವ ದಿ.ಅಂಬರೀಷ್ ಅವರ ಅವಧಿಯಲ್ಲಿ ಬೂದನೂರು ಕೆರೆಯನ್ನು ಸ್ವಚ್ಛಗೊಳಿಸಿ, ಪ್ರವಾಸಿತಾಣವನ್ನಾಗಿಸಲು ನಿರ್ಧರಿಸಲಾಗಿತ್ತು. ಆದರೆ, ಅದು ನನೆಗುದಿಗೆ ಬಿದ್ದಿದ್ದು, ಶೀಘ್ರವೇ ಕೆರೆಯನ್ನು ಸ್ವಚ್ಛಗೊಳಿಸುವುದರ ಜತೆಗೆ ಎರಡೂ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗುವುದು ಎಂದರು.

ನಾವು ವಾಸಿಸಲು ಪರಿಪೂರ್ಣ ಪರಿಸರವನ್ನು ಹೊಂದಿರುವುದರಿಂದ ಭೂಮಿಯ ಮೇಲೆ ಜೀವನ ಸಾಧ್ಯವಾಗಿದೆ. ಮುಂಬರುವ ಪೀಳಿಗೆಗೆ ಅದೇ ರೀತಿಯ ಅಥವಾ ಅಂತಹ ಅನುಭವವನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಭೂಮಿಯ ಮೇಲಿನ ಜೀವವನ್ನು ಉಳಿಸಲು, ಪರಿಸರವನ್ನು ಉಳಿಸುವುದು ಅತ್ಯಗತ್ಯ. ಮನುಷ್ಯನ ಸ್ವಾರ್ಥಕ್ಕಾಗಿ ಪರಿಸರ ಮತ್ತು ಜಲಮೂಲಗಳು ನಾಶವಾಗುತ್ತಿವೆ. ಇದರಿಂದಾಗಿ ಮಳೆ ಬಾರದೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಆದ್ದರಿಂದ ಪರಿಸರ ಮಾಲಿನ್ಯ ಮತ್ತು ಅವನತಿಯ ಪರಿಣಾಮಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಅವಶ್ಯಕತೆಯಿದೆ ಎಂದು ಸಲಹೆ ನೀಡಿದರು.

ಮುಂದಿನ ಪೀಳಿಗೆ ಬದುಕಬೇಕಾದರೆ ಅರಣ್ಯ ನಾಶವನ್ನು ನಿಲ್ಲಿಸಬೇಕು, ನೈಸರ್ಗಿಕ ನವೀಕರಿಸಲಾಗದ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪರಿಸರವನ್ನು ಸಂರಕ್ಷಿಸಲು ಅರಣ್ಯೀಕರಣ ಅತ್ಯುತ್ತಮ ಮಾರ್ಗವಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಮಾಲಿನ್ಯ ಮತ್ತು ಜನಸಂಖ್ಯೆಯನ್ನು ನಿಯಂತ್ರಿಸಿ, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಪರಿಸರ ನಾಶದಿಂದಾಗಿ ಪ್ರಾಣಿ ಸಂಕುಲಗಳು ನಶಿಸುತ್ತಿದ್ದು, ಕೇವಲ ಚಾರ್ಟ್ ಮತ್ತು ಪುಸ್ತಕಗಳಲ್ಲಿ ನೋಡುವಂತಾಗಿದೆ. ಆದ್ದರಿಂದ ಸ್ವಚ್ಛತೆಯನ್ನು ಕಾಪಾಡಿ ಪರಿಸರವನ್ನು ಉಳಿಸಿ ನಾವೂ ಉಳಿದು ಮುಂದಿನ ಜನಾಂಗವನ್ನು ಉಳಿಸೋಣ ಎಂದು ಮನವಿ ಮಡಿದರು.

ಬೂದನೂರು ಗ್ರಾಪಂ ಅಧ್ಯಕ್ಷೆ ಮಾನಸಾ, ಸದಸ್ಯರಾದ ನಾಗೇಶ್, ಕೆಂಪೇಗೌಡ, ಚಿಕ್ಕಸಿದ್ದು, ಸೌಭಾಗ್ಯ, ತಾಪಂ ಇಒ ವೀಣಾ, ಜಿಪಂ ಯೋಜನಾ ನಿರ್ದೇಶಕ ಸಂಜೀವಪ್ಪ, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ದಶರಥ, ಎನ್‌ಎಸ್‌ಎಸ್ ಘಟಕದ ಸಂಯೋಜನಾಧಿಕಾರಿ ಡಾ.ಕೆಂಪಮ್ಮ, ಪ್ರೊ.ಶಿವರಾಜು ಇತರರಿದ್ದರು. ಇದೇ ವೇಳೆ ಸರ್ಕಾರಿ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಅಂಕನಾಥೇಶ್ವರ ದೇವಾಲಯದ ಕಲ್ಯಾಣಿ ಸೇರಿದಂತೆ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net