

ಹಳೇಬೀಡು: ದಶಕದಿಂದ ನಿರೀಕ್ಷಿಸುತ್ತಿದ್ದ ಹಳೇಬೀಡು ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಕಾರ್ಯ ಚುರುಕಿನಿಂದ ಸಾಗಿದ್ದು, ಅಡ್ಡಿ ಆತಂಕದ ನಡುವೆಯೂ ಕಾಲಮಿತಿಯಲ್ಲೇ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಸಾರ್ವಜನಿಕರಲ್ಲಿ ಮೂಡಿದೆ.
ಇತಿಹಾಸ ಪ್ರಸಿದ್ಧ ದೇಗುಲಗಳಿರುವ ಹಳೇಬೀಡಿಗೆ ನಿತ್ಯವೂ ರಾಜ್ಯ ಹಾಗೂ ಹೊರರಾಜ್ಯಗಳ ಸಾವಿರಾರು ವಾಹನಗಳು ಬಂದು ಹೋಗುತ್ತವೆ. ಪಟ್ಟಣ ಪ್ರವೇಶಿಸಿದೊಡನೆ ಇದೊಂದು ಐತಿಹಾಸಿಕ ಸ್ಥಳವೆಂದು ಗುರುತಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಪ್ರಥಮವಾಗಿ ನಿರೀಕ್ಷಿತ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯು ಕೈಗೆತ್ತಿಕೊಂಡಿದೆ. ಜಾವಗಲ್ ವೃತ್ತದಿಂದ ಹೊಯ್ಸಳ ವೃತ್ತ ಮತ್ತು ಬಸ್ತಿಹಳ್ಳಿ ಗ್ರಾಮದವರೆಗೆ ಎರಡು ಮಾದರಿಯಲ್ಲಿ ರಸ್ತೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದ್ದು, ಒಟ್ಟು 5 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. ರಸ್ತೆ ಮಧ್ಯದ ಡಿವೈಡರ್ ಹೊರತುಪಡಿಸಿ ಒಟ್ಟು 80 ಅಡಿ ಜಾಗವನ್ನು ಸರ್ವೇ ಮೂಲಕ ಗುರುತಿಸಲಾಗಿದೆ. ಒಂದೊಂದು ಬದಿಗೆ 40 ಅಡಿ ರಸ್ತೆ, ಆಧುನಿಕ ಮಾದರಿ ಚರಂಡಿ ಹಾಗೂ ಪಾದಚಾರಿ ಮಾರ್ಗ ನಿರ್ಮಿಸಲಾಗುವುದು. ಮಾರ್ಗದುದ್ದಕ್ಕೂ ಆಕರ್ಷಕ ವಿದ್ಯುದ್ದೀಪಗಳನ್ನು ಅಳವಡಿಸುವ ಬಗ್ಗೆಯೂ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಯಾವುದೇ ತಿದ್ದುಪಡಿಗಳಿಲ್ಲದೆ, ಯಥಾವತ್ ಕಾಮಗಾರಿ ನಡೆಯಲಿದೆ.
ಬಸ್ತಿಹಳ್ಳಿ ಗ್ರಾಮದಿಂದ ಹಗರೆವರೆಗಿನ ರಸ್ತೆಯನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದ್ದು, ಗುಂಡಿ ಬಿದ್ದಿದ್ದ ಕಡೆ ಮುಚ್ಚಿ, ಉಳಿದ ರಸ್ತೆಗೆ ಡಾಂಬರ್ ಹಾಕಲಾಗಿದೆ. ಯೋಜನೆಯ ಪ್ರಕಾರ ಪಾದಚಾರಿ ಮಾರ್ಗ, ವಿದ್ಯುದ್ದೀಪ ಮುಂತಾದವು ಸೇರಿದಂತೆ ಇನ್ನಷ್ಟು ಸೌಲಭ್ಯ ಕಲ್ಪಿಸುವ ನಿರೀಕ್ಷೆ ಇದೆ.
ವರ್ಷದಲ್ಲಿ ಪೂರ್ಣ: ಅನಧಿಕೃತ ಕಟ್ಟಡ ಹಾಗೂ ಅಂಗಡಿಗಳನ್ನು ತೆರವುಗೊಳಸಿ ರಸ್ತೆಗೆ ಬೇಕಾದ ಶೇ.80ರಷ್ಟು ಜಾಗವನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದ್ದು, ಚರಂಡಿ ನಿರ್ಮಾಣ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಒಂದು ಪಾರ್ಶ್ವದ ಕಾಮಗಾರಿಯು ಶೇ.60ರಷ್ಟು ಮುಗಿದಿದ್ದು, ಇನ್ನೊಂದು ಕಡೆಯ ಚರಂಡಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣೆ ಕೇಂದ್ರವು(ಪ್ರಾಂಸಿ) ಕಾಮಗಾರಿಯ ಹೊಣೆ ಹೊತ್ತಿದ್ದು, ವರ್ಷದೊಳಗೆ ಪೂರ್ವ ನಿರ್ಧರಿತ ನಕ್ಷೆಯಂತೆ ರಸ್ತೆ, ಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಹೈಟೆಕ್ ವಿದ್ಯುದ್ದೀಪಗಳ ಅಳವಡಿಕೆ ಕಾರ್ಯ ಮುಗಿಸುವ ವಿಶ್ವಾಸವನ್ನು ಗುತ್ತಿಗೆದಾರರು ವ್ಯಕ್ತಪಡಿಸಿದ್ದಾರೆ.