

ಹಳೇಬೀಡು: ನಮ್ಮ ನಡಿಗೆ ದ್ವಾರಸಮುದ್ರದೆಡೆಗೆ ಎಂಬ ಘೋಷವಾಕ್ಯದೊಂದಿಗೆ ಶನಿವಾರ ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ರಣಘಟ್ಟ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಹಳೇಬೀಡಿನ ಮುಖ್ಯಬೀದಿಗಳಲ್ಲಿ ಪಾದಯಾತ್ರೆ ನಡೆಯಿತು.
ತರಳಬಾಳು ಬೃಹನ್ಮಠದ ಶ್ರೀಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜತೆಗೆ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ ಸ್ವಾಮೀಜಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಬೆಳಗ್ಗೆ 10 ಗಂಟೆಗೆ ರಾಜನಸಿರಿಯೂರು ವೃತ್ತದಿಂದ ನಡಿಗೆ ಆರಂಭಿಸಿದ ಶ್ರೀಗಳು ಜಾವಗಲ್ ವೃತ್ತ ಹಾಗೂ ಹೊಯ್ಸಳ ವೃತ್ತವನ್ನು ದಾಟಿ ಐತಿಹಾಸಿಕ ಹೊಯ್ಸಳೇಶ್ವರ ದೇಗುಲವನ್ನು ತಲುಪಿದರು.
ಸಿರಿಗೆರೆ ಮಠದ ಪಟ್ಟದ ಆನೆಯು ಮುಂದೆ ಸಾಗುತ್ತಿದ್ದರೆ, ಅದರ ಹಿಂದೆ ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಸಾಗಿ ಪಾದಯಾತ್ರೆಗೆ ಮೆರುಗು ತಂದರು. ಬಳಿಕ ದ್ವಾರಸಮುದ್ರ ಕೆರೆಗೆ ತೆರಳಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಕೆರೆಯಲ್ಲಿ ಇತ್ತೀಚೆಗೆ ಆರಂಭವಾಗಿರುವ ದೋಣಿವಿಹಾರ ಸೇವೆ ಬಗ್ಗೆ ಮಾಹಿತಿ ಪಡೆದುಕೊಂಡು ಇನ್ನಷ್ಟು ಆಕರ್ಷಣೀಯ ಸೇವೆ ಒದಗಿಸಲು ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಬಳಿಕ ಸ್ವಾಮೀಜಿಗಳು, ಶಾಸಕ ಕೆ.ಎಸ್.ಲಿಂಗೇಶ್ ಹಾಗೂ ಇನ್ನಿತರ ಗಣ್ಯರು ಬೋಟ್‌ನಲ್ಲಿ ತೆರಳಿ ಕೆರೆಯನ್ನು ವೀಕ್ಷಿಸಿದರು.
ಮುಖಂಡರಾದ ಎಚ್.ಎಂ.ಕುಮಾರಸ್ವಾಮಿ, ಗ್ರಾನೈಟ್ ರಾಜಶೇಖರ್ ಹಾಗೂ ತರಳಬಾಳು ಹುಣ್ಣಿಮೆ ಮಹೋತ್ಸವದ ಪದಾಧಿಕಾರಿಗಳು ಇದ್ದರು.
ಹೊಯ್ಸಳೇಶ್ವರ ದೇಗುಲ ವೀಕ್ಷಿಸಿದ ಶ್ರೀಗಳು
ವಿವಿಧ ಮಠಾಧೀಶರೊಂದಿಗೆ ಪಾದಯಾತ್ರೆಯ ಮೂಲಕ ಸಾಗಿ ಐತಿಹಾಸಿಕ ಹೊಯ್ಸಳೇಶ್ವರ ದೇಗುಲಕ್ಕೆ ಬಂದ ಸಿರಿಗೆರೆ ಶ್ರೀಗಳಿಗೆ ಅರ್ಚಕರು ಹಾಗೂ ಸಿಬ್ಬಂದಿ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.
ಮೂಲ ದೇವರಗುಡಿಯಲ್ಲಿ ಮಂಗಳಾರತಿ ವೀಕ್ಷಿಸಿ, ದೇಗುಲದ ಸುತ್ತಲಿನ ಕಲಾ ಸೊಬಗನ್ನು ಕಣ್ತುಂಬಿಕೊಂಡರು. ಹಳೇಬೀಡು ಎಂದರೆ ಪ್ರಾಚೀನ ಗ್ರಾಮವೆ ಹೊರತು ಹಾಳಾಗಿರುವ ಊರಲ್ಲ. ಪೂರ್ವಾಗ್ರಹವನ್ನು ಬಿಟ್ಟು ಈ ಶಿಲ್ಪಕಲಾ ವೈಭವವನ್ನು ಪ್ರತಿಯೊಬ್ಬರು ನೋಡಿ ಅನುಭವಿಸಬೇಕು. ಭಾರತದ ಮತ್ತು ಪ್ರಾದೇಶಿಕ ಸಾಂಸ್ಕೃತಿಕ ವೈಭವವನ್ನು ಇಲ್ಲಿ ಕಾಣಬಹುದು. ರಾಜ್ಯ ಮುಜರಾಯಿ, ಪ್ರವಾಸೋದ್ಯಮ ಇಲಾಖೆ ಹಾಗೂ ಕೇಂದ್ರ ಪುರಾತತ್ವ ವಿಭಾಗಗಳು ಸಮನ್ವಯತೆಯಿಂದ ಕೆಲಸ ಮಾಡಿ ಪುರಾತನ ದೇಗುಲ, ಸ್ಮಾರಕಗಳನ್ನು ರಕ್ಷಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು ಎಂದರು.