

ಹಳೇಬೀಡು: ವಿವಿಧ ಸಾಮಾಜಿಕ ಕಾರ್ಯಗಳನ್ನು ನಿಸ್ವಾರ್ಥವಾಗಿ ನಡೆಸುತ್ತಿರುವ ಚಂದ್ರಲೇಖಾ ಟ್ರಸ್ಟ್ ನ ಸೇವಾ ಮನೋಭಾವ ಶ್ಲಾಘನೀಯ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಮುಳ್ಳಯ್ಯ ಹೇಳಿದರು.
ಗುರುವಾರ ಇಲ್ಲಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 2.50 ಲಕ್ಷ ರೂ ವೆಚ್ಚದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ವಿವಿಧ ಶಾಲಾ ಮಕ್ಕಳಿಗೆ 7000 ನೋಟ್‌ಬುಕ್‌ಗಳನ್ನು ವಿತರಿಸಿರುವ ಚಂದ್ರಲೇಖಾ ಟ್ರಸ್ಟ್ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಎಚ್.ಎಸ್.ಸುಬ್ರಹ್ಮಣ್ಯ ಅಭಿನಂದನಾರ್ಹರು.
ಸಂಸ್ಥೆಯ ಇನ್ನಿತರ ಪದಾಧಿಕಾರಿಗಳು ಸೇವಾ ಮನೋಭಾವನೆಯಿಂದ ಆಯ್ದ ಗ್ರಾಮಗಳ ಶಾಲೆಗಳಿಗೆ ತೆರಳಿ ಸ್ವಹಸ್ತದಿಂದ ಪುಸ್ತಕ ಕೊಡುತ್ತಿದ್ದಾರೆ. ಸರ್ಕಾರ ಪಠ್ಯಪುಸ್ತಕಗಳನ್ನು ಉಚಿತವಾಗಿ ಕೊಡುತ್ತದೆ, ಆದರೆ ನೋಟ್‌ಬುಕ್‌ಗಳನ್ನು ಮಕ್ಕಳು ಹಣ ತೆತ್ತು ಕೊಳ್ಳಬೇಕಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಸಮುದಾಯದ ವಿದ್ಯಾರ್ಥಿಗಳೆ ಹೆಚ್ಚು ಇರುವುದರಿಂದ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಕಾರ್ಯವು ಮಾದರಿಯಾಗಿದೆ. ಶಿಕ್ಷಣ ಕ್ಷೇತ್ರದ ಜತೆಗೆ ಇನ್ನಿತರ ಹಲವು ವಲಯಗಳಲ್ಲಿ ಟ್ರಸ್ಟ್ನ ಕಾರ್ಯಗಳು ನಡೆಯುತ್ತಿದ್ದು ವಾರ್ಷಿಕ 5 ಲಕ್ಷರೂಗಳನ್ನು ಸಾಮಾಜಿಕ ಕಾರ್ಯಕ್ಕೆ ವ್ಯಯಿಸುತ್ತಿದ್ದಾರೆ ಎಂದು ಹೇಳಿದರು.
ಚಂದ್ರಲೇಖಾ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಹಲವು ದಶಕಗಳ ಕಾಲ ಜಿಲ್ಲೆಯ ಬಾಳ್ಳುಪೇಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿತ್ತು. ಆಗ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸದ ಬವಣೆಗಳು ಅರ್ಥವಾದವು. ಓದುವ ಆಸಕ್ತಿ ಇದ್ದರೂ ಮನೆಯಲ್ಲಿನ ಪ್ರತಿಕೂಲ ಪರಿಸ್ಥಿಯಿಂದಾಗಿ ಅನೇಕ ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಮಲೆನಾಡು ಭಾಗದಲ್ಲಿ ಇಂತಹ ಪರಿಸ್ಥಿತಿ ಈಗಲೂ ಅಲ್ಲಲ್ಲಿ ಕಂಡುಬರುತ್ತದೆ. ನಿವೃತ್ತಿ ಬಳಿಕ ಶಿಕ್ಷಣ ಕ್ಷೇತ್ರಕ್ಕೆ ಕೈಲಾದ ಸೇವೆ ಮಾಡುವ ಇಚ್ಚೆ ಮೂಡಿದ ಕಾರಣ ಸಹೃದಯ ಮಿತ್ರರ ಸಹಕಾರದೊಂದಿಗೆ ಅಲ್ಪ ಸೇವೆ ಮಾಡುತ್ತಿದ್ದೇವೆ ಎಂದರು.ಟ್ರಸ್ಟ್ ಉಪಾಧ್ಯಕ್ಷೆ ಉಷಾ ಸುಬ್ರಹ್ಮಣ್ಯ, ಕಾರ್ಯದರ್ಶಿ ಕೆ.ವಿ. ನಾಗರಾಜ್, ಖಜಾಂಚಿ ರಂಗಸ್ವಾಮಿ, ನಿರ್ದೇಶಕರಾದ ಬಾಳ್ಳುಪೇಟೆ ಧರ್ಮಪ್ರಕಾಶ್, ಎಚ್.ವಿ.ಗೋಪಾಲಕೃಷ್ಣ, ವೈ.ಆರ್. ಮಂಜುನಾಥ್ ಮತ್ತಿತರರಿದ್ದರು.