ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Oplus_0
Oplus_0
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ಜನ್ಮದಿನ ನಿಮಿತ್ತ ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ ವತಿಯಿಂದ ಶುಕ್ರವಾರ ಡಿ.ವಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗೋಕಾಕ ಮೂಲದ ಸಿದ್ದಪ್ಪ ಪಾಟೀಲ ಅವರಿಗೆ ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ, ಗದಗ ಮೂಲದ ಕಮಲ್​ಅಹ್ಮದ್​ ಎಂ. ಅವರಿಗೆ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ, ಮಹಾರಾಷ್ಟ್ರ ಮೂಲದ ನಿಲೇಶ ಭಾರ್ತಿ ಹಾಗೂ ನಿಲಿಶಾ ಫಾಡ್​ ಅವರಿಗೆ ಯುವ ಕುಂಚ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ 1 ಲಕ್ಷ ರೂ.ನಗದು, ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ 50 ಸಾವಿರ ರೂ. ನಗದು ಹಾಗೂ ಯುವ ಪ್ರಶಸ್ತಿ ತಲಾ 25 ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡಿವೆ.

ಚಲನಚಿತ್ರ ನಟ ಸುರೇಶ ಹೆಬ್ಳೀಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಾಲಭಾವಿ ಅವರು ಯುವಕರಿಗೆ ಸಹಾಯ, ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದರು. ಬಡ ಮಕ್ಕಳ ಅನುಕೂಲಕ್ಕೆ ಚಿತ್ರಕಲಾ ಶಾಲೆ ಆರಂಭಿಸಿ ಚಿತ್ರಕಲೆಗೆ ನೀಡಿದ ಕೊಡುಗೆ ಸ್ಮರಣೀಯ. ಚಿತ್ರಕಲೆ ಮನುಷ್ಯನ ಅಂತರಂಗ, ಭಾವನೆಯಲ್ಲಿ ಮೂಡಲಿದೆ. ಚಿತ್ರಕಲೆ ಕಲಿಸಲು ಶಿಕ್ಷಕರಿದ್ದರೂ, ವ್ಯಕ್ತಿಯಲ್ಲಿ ಕಲಿಯುವ ಉತ್ಸಾಹ ಇದ್ದಾಗಲೇ ಕಲೆ ಸಿದ್ಧಿಸಲು ಸಾಧ್ಯ ಎಂದರು.

ಭಾಷೆಗಿಂತ ಮೊದಲು ಚಿತ್ರಕಲೆ ಹುಟ್ಟಿದೆ. ಭಾಷೆ ಇಲ್ಲದ ಕಾಲದಲ್ಲಿ ಕಲ್ಲಿನ ಕೆತ್ತನೆಗಳ ಮೂಲಕ ಮನುಷ್ಯರ ನಡುವೆ ಸಂವಹನ ನಡೆಯುತ್ತಿತ್ತು. ಇಂತಹ ಕಲೆಗೆ ಬಹಳಷ್ಟು ಆದ್ಯತೆ ನೀಡಬೇಕಿದೆ. ಅರಣ್ಯ, ಜೀವ ವೈವಿಧ್ಯತೆ, ಕೆರೆಗಳು ಉಳಿದಾಗ ಮಾತ್ರ ಚಿತ್ರಕಲೆ ಉಳಿಯಲು ಸಾಧ್ಯ ಎಂದರು.

ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದ ಸಿದ್ದಪ್ಪ ಪಾಟೀಲ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್​. ಚನ್ನೂರ, ಟ್ರಸ್ಟ್​ ಸದಸ್ಯರಾದ ಪಾರ್ವತಿ ಹಾಲಭಾವಿ, ಶಶಿ ಸಾಲಿ, ಬಿ.ಮಾರುತಿ, ಬಿ.ಎಂ.ಪಾಟೀಲ, ಬಿ.ಎಚ್​. ಕುರಿಯವರ, ಕಲಾವಿದರು, ಇತರರು ಇದ್ದರು.

ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಸುರೇಶ ಹಾಲಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net