

ಹೂವಿನಹಡಗಲಿ: ಹಿರೇಹಡಗಲಿ ಗ್ರಾಮದಲ್ಲಿ ಹಾಲಸ್ವಾಮಿಗಳ ಮುಳ್ಳು ಗದ್ದುಗೆ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರದಿಂದ ಗುರುವಾರ ಜರುಗಿತು.
ಅನುಷ್ಠಾನ ಕೈಗೊಂಡಿದ್ದ ಅಮೃತೇಶ್ವರ ಹಾಲಸ್ವಾಮೀಜಿ ಮಠದಲ್ಲಿ ಇಷ್ಟಲಿಂಗ ಪೂಜೆ ಸಲ್ಲಿದ ನಂತರ ರಾತ್ರಿ 11 ಗಂಟೆಗೆ ಮುಳ್ಳಿನ ಮಂಟಪವನ್ನು ಆರೋಹಣ ಮಾಡಿದರು. ಇದಕ್ಕೂ ಮೊದಲು ಮಠದ ಭಕ್ತಾದಿಗಳು ಮುಳ್ಳಗಳನ್ನು ತಂದು, ಮುಳ್ಳಿನ ಗದ್ದುಗೆ ಸಿದ್ಧಪಡಿಸಿದರು.
ಹಾಲಸ್ವಾಮಿ ಮಠದ ದೇವತೆಯಾಗಿರುವ ತೇಜಮ್ಮ (ಕುದುರೆ) ನೊಂದಿಗೆ ಗ್ರಾಮದ ಸಮೀಪವಿರುವ ಮಾನಿಹಳ್ಳಿಗೆ ತೆರಳಿ ಬನ್ನಿಮಹಾಂಕಾಳಿಗೆ ಪೂಜೆ ನೆರವೇರಿಸಿದ ಬಳಿಕ ಹಾಲಸ್ವಾಮಿ ಮಠದಿಂದ ಆರಂಭವಾದ ಮುಳ್ಳು ಗದ್ದುಗೆ ಉತ್ಸವ ಗ್ರಾಮದ ಪ್ರಮುಖ ಬೀದಿಯ ಮೂಲಕ ಸಾಗಿ ಬೆಳಗಿನ ಜಾವ ಮೂಲ ಸ್ಥಳದಲ್ಲಿ ಸಂಪನ್ನಗೊಂಡಿತು. ಉತ್ಸವದ ಉದ್ದಕ್ಕೂ ಹಾಲಸ್ವಾಮಿಯ ಬಹುಪರಾಕ್, ಜಯಘೋಷಗಳು ಮೊಳಗಿದವು. ಸಮಾಳ, ನಂದಿಕೋಲು, ಡೊಳ್ಳುಕುಣಿತ ಸೇರಿದಂತೆ ಇತರ ಮಂಗಳವಾದ್ಯಗಳು ಉತ್ಸವಕ್ಕೆ ಮೆರಗು ತಂದವು.
ನಂತರ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸರ್ವಧರ್ಮದವರು ಹಾಲಸ್ವಾಮಿ ಗದ್ದುಗೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಶುಕ್ರವಾರ ಸಂಜೆ ಹಾಲಸ್ವಾಮಿ ರಥೋತ್ಸವ ಸಂಭ್ರಮದಿಂದ ಜರುಗಿತು.