

ಬೆಂಗಳೂರು: ನಗರದ ಹಲಸೂರಿನಲ್ಲಿ ಭಾನುವಾರ ಊರ ದೇವರ ಪಲ್ಲಕ್ಕಿ ಉತ್ಸವ ವೈಭವಯುತವಾಗಿ ಜರುಗಿತು. ಈ ವೇಳೆ ಮಲ್ಲಿಗೆ ಹೂಗಳಿಂದ ಸಿಂಗಾರಗೊಂಡ ಹತ್ತಾರು ಪಲ್ಲಕಿಗಳಲ್ಲಿ ದೇವತೆಗಳ ಮೆರವಣಿಗೆ ಅದ್ದೂರಿಯಾಗಿ ಸಾಗಿತು.
ಉತ್ಸವ ಸಾಗುವ ರಸ್ತೆಗಳು ವಿದ್ಯುದ್ದೀಪಗಳು ಹಾಗೂ ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದವು. ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಕಂಗೊಳಿಸುತ್ತಿದ್ದವು. ದೇವರುಗಳ ಪಲ್ಲಕ್ಕಿ ಉತ್ಸವ ಬರುತ್ತಿದ್ದಂತೆ ಸ್ಥಳೀಯರು ದೇವರಿಗೆ ಪೂಜೆ ಸಲ್ಲಿಸಿದರು.
ಉತ್ಸವಕ್ಕಾಗಿ ತಮಿಳುನಾಡಿನ ಚೆನ್ನೈನಿಂದ ಲೋಡ್‌ಗಟ್ಟಲೆ ಮಲ್ಲಿಗೆ ಮೊಗ್ಗು ಬರುವುದು ಇಲ್ಲಿನ ಮತ್ತೊಂದು ವಿಶೇಷ. ಪಲ್ಲಕ್ಕಿಗಳ ಅಲಂಕಾರಕ್ಕೆ ಬೆಂಗಳೂರು ಹಾಗೂ ಸುತ್ತಮುತ್ತಲಿನವರಲ್ಲದೆ, ತಮಿಳುನಾಡಿನಿಂದಲೂ ಜನರು ಆಗಮಿಸುತ್ತಾರೆ. ನಗರದ ನಾನಾ ಭಾಗಗಳ ಊರ ದೇವತೆಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು. ಸುಮಾರು 60ಕ್ಕೂ ಹೆಚ್ಚು ಪಲ್ಲಕಿಗಳು ಮೆರವಣಿಗೆಯಲ್ಲಿ ಸಾಗಿದವು. ತಡ ರಾತ್ರಿ ಆರಂಭವಾದ ಉತ್ಸವ ಮರುದಿನದವರೆಗೂ ಸಾಗಿತು.