ಮನಸೆಳೆವ ಮಾವು ಹಲಸಿನ ಘಮ,  ಭಗಿನಿ ಮಂಡಳದಲ್ಲಿ ಮೇಳ ಆಯೋಜನೆ

IMG-20250607-WA0006-1.jpg
Published on

ಹುಬ್ಬಳ್ಳಿ: ಸಾವಯವ ಪದ್ಧತಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಇಂತಹ ಮೇಳದಿಂದ ಗ್ರಾಹಕರು ಮತ್ತು ರೈತರ ಮಧ್ಯೆ ಸಂಪರ್ಕ ಏರ್ಪಟ್ಟು ಉತ್ತಮ ಮಾರುಕಟ್ಟೆ ಸಿಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಇಲ್ಲಿಯ ಜೆ.ಸಿ.ನಗರ ಭಗಿನಿ ಮಂಡಳದಲ್ಲಿ ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ಸಾವಯವ ಮಾವು ಮತ್ತು ಹಲಸಿನ ಮೇಳವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತರು ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಈ ಮಧ್ಯೆ ಸರ್ಕಾರ ಪುಕ್ಕಟ್ಟೆ ಅಕ್ಕಿ, ಹಣ ಕೊಡುತ್ತಿರುವುದರಿಂದ ಕೃಷಿ ಕೆಲಸಕ್ಕೆ ಆಳುಗಳೇ ಸಿಗುತ್ತಿಲ್ಲ. ಇದರ ಮಧ್ಯೆಯೂ ರೈತರು ತರಹೇವಾರಿ ಹಣ್ಣು ಬೆಳೆಯುತ್ತಿರುವುದು ಸಂತಸದ ಸಂಗತಿ ಎಂದರು.

ನಾನು ಕೂಡ ಹಲಸು, ಮಾವು ಸೇರಿ ಹಲವು ಹಣ್ಣುಗಳನ್ನು ಬೆಳೆಯುತ್ತೇನೆ. ಸಾವಯವದಲ್ಲಿ ಬೆಳೆದ ಹಣ್ಣು- ಹಂಪಲು ಆರೋಗ್ಯಕ್ಕೆ ಒಳ್ಳೆಯದು. ಮಕ್ಕಳಿಗಂತೂ ತುಂಬಾ ಉತ್ತಮ. ಯಾವುದೇ ರಾಸಾಯನಿಕಗಳು ಇಲ್ಲದೆ ಬೆಳೆಯುವ ಹಲಸನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಅತಿಥಿಯಾಗಿದ್ದ ರೋಟರಿ ಕ್ಲಬ್ ಅಧ್ಯಕ್ಷ ಬಾಪುಗೌಡ ಬಿರಾದಾರ ಮಾತನಾಡಿ, ಹಲಸು ನಿರ್ಲಕ್ಷಿತ ಹಣ್ಣು. ಇದಕ್ಕೆ ಮೌಲ್ಯ ತಂದುಕೊಡುವ ಕೆಲಸ ಮೇಳದಿಂದ ಆಗುತ್ತಿದೆ. ಗ್ರಾಹಕರು ಮತ್ತು ರೈತರನ್ನು ಒಂದೆಡೆ ಸೇರಿಸುವ ಮೇಳಗಳು ನಿರಂತರ ನಡೆಯಬೇಕು ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಎ.ವಿ. ಸಂಕನೂರ ಮಾತನಾಡಿ, ನೈಸಗಿರ್ಕವಾಗಿ ಸಿಗುವ ಹಲಸು ಪ್ರಕೃತಿ ನೀಡಿದ ಕೊಡುಗೆ. ವಿವಿಧ ಬಣ್ಣ, ರುಚಿಯ ಹಲಸಿನ ತಳಿಗಳನ್ನು ತಿನ್ನುವುದೇ ಒಂದು ಸಂಭ್ರಮ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net