ಹಲಸಿ ಗುಂಡಿನ ದಾಳಿ ಪ್ರಕರಣದಲ್ಲಿ ಐವರ ಬಂಧನ

14Jaggu4
Published on

ಬೆಳಗಾವಿ: ಖಾನಾಪುರ ತಾಲೂಕಿನ ಹಲಸಿ ಗ್ರಾಮ ಬಳಿ ವ್ಯಕ್ತಿಯೊಬ್ಬರು ಆಕಸ್ಮಿಕ ಗುಂಡಿನ ದಾಳಿಯಿಂದ ಮೃತಪಟ್ಟಿದ್ದು, ಈ ಪ್ರಕರಣದಲ್ಲಿ ಈವರೆಗೆ ಐವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ತುಮಸಾಬ್ ತಹಸೀಲ್ದಾರ್, ಉಸ್ಮಾನಸಾಬ್ ತಹಸೀಲ್ದಾರ್, ಮಲ್ಲಿಕ್ ಶಾಹಿವಾಲೆ, ಅರ್ಬಾಜ್ ಕಿತ್ತೂರು, ಮಾರುತಿ ಸುತಾರ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ನ.11ರಂದು ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಹಲಸಿಯ ಅಲ್ತಾಫ್ ಮಕಾನದಾರ(30) ಮೃತಪಟ್ಟಿದ್ದಾರೆ. ಆರೋಪಿಗಳಾದ ಮಕ್ತುಮಸಾಬ್ ತಹಸೀಲ್ದಾರ್, ಉಸ್ಮಾನಸಾಬ್ ತಹಸೀಲ್ದಾರ್ ಮತ್ತು ಅವರ ನೆರೆಹೊರೆಯವರು ಅಲ್ತಾಫ್ ಮೃತದೇಹವನ್ನು ಮನೆಗೆ ತಂದಿದ್ದರು.

ಮಕ್ತುಮಸಾಬ್ ಮತ್ತು ಉಸ್ಮಾನಸಾಬ್ ಈ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಅಲ್ತಾಫ್ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಬಳಿಕ ಅವರನ್ನು ವಿಚಾರಿಸಿದಾಗ ಹಳ್ಳದಲ್ಲಿ ಮರಳು ತೆಗೆಯುತ್ತಿರುವಾಗ, ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಗುಂಡು ಹಾರಿಸಿ ಅಲ್ತಾಫ್ ಕೊಲೆ ಮಾಡಿದ್ದಾರೆ ಎಂದು ಸುಳ್ಳು ಮಾಹಿತಿ ಹರಡಿದ್ದರು.

ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಪರಿಶೀಲಿಸಿದಾಗ, ಮಾಂಸದ ಚೀಲವೊಂದು ಸಿಕ್ಕಿತ್ತು. ಸಂಶಯದಿಂದ ವಿಚಾರಣೆ ತೀವ್ರಗೊಳಿಸಿದಾಗ ನವಿಲು ಬೇಟೆಯಾಡಿರುವುದು ತಿಳಿದು ಬಂದಿದೆ. ಆರಂಭದಲ್ಲಿ ಮಕ್ತುಮಸಾಬ್, ಉಸ್ಮಾನಸಾಬ್ ಮತ್ತು ಮಲ್ಲಿಕ್ ವಶಕ್ಕೆ ಪಡೆದಿದ್ದೆವು. ಪರಾರಿಯಾಗಿದ್ದ ಅರ್ಬಾಜ್‌ನನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದ್ದೇವೆ. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಹಾಗೂ ನವಿಲು ಬೇಟೆಯಾಡಿದ ಕಾರಣ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾರುತಿ ಸುತಾರ ಎಂಬುವರಿಗೆ ಸೇರಿದ ಶಸ್ತ್ರಾಸ್ತ್ರ ಬಳಸಿ, ಹಲವು ಬಾರಿ ಕಾಡುಪ್ರಾಣಿ, ಪಕ್ಷಿಗಳ ಬೇಟೆಯಾಡಿರುವುದು ಗಮನಕ್ಕೆ ಬಂದಿದೆ. ಮಾರುತಿ ಸುತಾರ ಅನಧಿಕೃತವಾಗಿ ಶಸ್ತ್ರಾಸ್ತ್ರ ತಯಾರಿಸುತ್ತಿರುವಮಾಹಿತಿ ಸಿಕ್ಕಿದ್ದು ಆತನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net