

ಯಲಬುರ್ಗಾ: ಸತ್ಯ ಹರಿಶ್ಚಂದ್ರ ಬಂದರೂ ಕ್ಷೇತ್ರಕ್ಕೆ ಕೃಷ್ಣೆಯ ನೀರು ಬರಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ನೀಡಿದ ಮಾತಿನಂತೆ ಈಗ ಕೆರೆಗಳಿಗೆ ನೀರು ಹರಿಸಲಾಗಿದೆ ಎಂದು ಸಚಿವ, ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಹೇಳಿದರು
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದಾಗ ಅಡ್ಡಗಲ್ಲು ಎಂದು ಜರಿದಿದ್ದ ರಾಯರಡ್ಡಿಗೆ ಕ್ಷೇತ್ರದ ರೈತರ ಕಾಳಜಿ ಇದೆಯಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅವಧಿಯಲ್ಲಿನ ಕಾಮಗಾರಿಗಳು ಅವೈಜ್ಞಾನಿಕದಿಂದ ಕೂಡಿವೆ. ಕೆರೆ ತುಂಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಮತದಾರರ ಮುಂದೆ ಸುಳ್ಳು ಹೇಳಿ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಮಾತಿಗೆ ಕಿವಿಗೊಡಬಾರದು ಎಂದರು.
ಪಟ್ಟಣ ಪಂಚಾಯತಿ ಕಚೇರಿ ನವೀಕರಣ, ಸಂತೆ ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗಿದೆ. ಕೆರೆಗಳ ಅಭಿವೃದ್ಧಿ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಕೋರಿದರು.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಾರ್ಯಕರ್ತರು ಸಚಿವ ಹಾಲಪ್ಪ ಆಚಾರ್ ಹಾಗೂ ಮುಖಂಡರಿಗೆ ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಸಚಿವರಿಗೆ ಮಹಿಳೆಯರು ಕಳಸ ಬೆಳಗಿ ಶುಭಕೋರಿದರು. ಪ್ರಚಾರದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸದಸ್ಯರಾದ ಕಲಾವತಿ ಮರದಡ್ಡಿ, ಕಳಕಪ್ಪ ತಳವಾರ್, ಮುಖಂಡರಾದ ಸಿ.ಎಚ್.ಪಾಟೀಲ್, ಬಸಲಿಂಗಪ್ಪ ಭೂತೆ, ಅರವಿಂದಗೌಡ ಪಾಟೀಲ್ ಇದ್ದರು.