ಹಲಾಲ್ ಮುಕ್ತ ಗಣೇಶೋತ್ಸವ ನಡೆಯಲಿ

Published on

ಬೆಳಗಾವಿ: ಈ ವರ್ಷದಿಂದ ಹಲಾಲ್ ಮುಕ್ತ ಗಣೇಶೋತ್ಸವ ಆಚರಿಸಲು ಹಿಂದುಗಳು ಸಂಕಲ್ಪ ಮಾಡಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಹಲಾಲ್ ಮುಕ್ತ ಗಣೇಶ ಹಬ್ಬ ಆಚರಿಸುವಂತೆ ಜಾಗೃತಿ ಅಭಿಯಾನ ಆರಂಭಿಸಲಾಗುತ್ತಿದೆ. ಹಾಗಾಗಿ, ಗಣೇಶ ಹಬ್ಬದಲ್ಲಿ ಹೂವು, ಹಣ್ಣು, ಕಾಯಿ ಸೇರಿ ಇತರ ವಸ್ತುಗಳನ್ನು ಹಲಾಲ್ ಕಟ್ ಮಾಡುವವರಿಂದ ಖರೀದಿಸಬೇಡಿ ಎಂದರು.

ಗೋ ಹಂತಕರು, ಗೋ ಭಕ್ಷಕರು ಮಾರಾಟ ಮಾಡುವ ವಸ್ತು ಅಪವಿತ್ರವಾಗಿರುತ್ತದೆ. ಅಲ್ಲದೆ, ಹಿಂದು ಧಾರ್ಮಿಕ ಪ್ರದೇಶ, ದೇವಾಲಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಾರದ ಹೆಸರಿನಲ್ಲಿ ಬರುವ ಅನ್ಯಧರ್ಮದವರು ದೇವಸ್ಥಾನವನ್ನೇ ಧ್ವಂಸ ಮಾಡುತ್ತಾರೆ. ಹೈದರಾಬಾದ್‌ನಲ್ಲಿ 16 ದೇವಸ್ಥಾನಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದರು.

ನೆರೆಯ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಬಾಂಗ್ಲಾದೇಶಕ್ಕೆ ತಕ್ಕ ಉತ್ತರ ಕೊಡಬೇಕಿದ್ದ ಕೇಂದ್ರ ಸರ್ಕಾರ ಮೌನ ವಹಿಸಿದೆ. ಅಲ್ಲದೆ, ಆ ದೇಶದ ಪ್ರಧಾನಿ ರಕ್ಷಣೆಗೆ ಕೊಡುವುದರಲ್ಲಿನ ಆಸಕ್ತಿ ಅಲ್ಲಿನ ಹಿಂದುಗಳ ರಕ್ಷಣೆಗೆ ಏಕೆ ಇಲ್ಲ? ಇಂದಿರಾಗಾಂಧಿ ಅವರು 1971ರಲ್ಲಿ ನಡೆಸಿದ ಯುದ್ಧ ಮಾದರಿಯಲ್ಲಿ ಬಾಂಗ್ಲಾದೇಶದ ಮೇಲೆ ಕೇಂದ್ರ ಸರ್ಕಾರ ಯುದ್ದ ನಡೆಸಬೇಕು. ದೇಶದಲ್ಲಿ 5 ಕೋಟಿ ಬಾಂಗ್ಲಾ ನುಸುಳುಕೋರರು ಇದ್ದಾರೆ. ಕರ್ನಾಟಕದಲ್ಲಿ 12 ಲಕ್ಷ ಜನರಿದ್ದು, ಅವರನ್ನು ಹೊರಹಾಕಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿರುವುದನ್ನು ಹಿಂಪಡೆಯಬೇಕಿತ್ತು. ಆದರೆ, ಇವರಿಗೆ ಚುನಾವಣೆಯಲ್ಲಿ ಮಾತ್ರ ಹಿಂದುಗಳು ನೆನಪಾಗುತ್ತಾರೆ. ಪಕ್ಷ ಹುಟ್ಟಿದ್ದೇ ಜನಸಂಘ ಎಂಬ ಹಿಂದು ಸಂಘಟನೆಯಿಂದ ಎಂಬುದನ್ನು ಬಿಜೆಪಿ ನಾಯಕರು ನೆನಪು ಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಶ್ರೀರಾಮಸೇನಾ ಮುಖಂಡರಾದ ರವಿ ಕೋಕಿತ್ಕರ್, ವಿನಯ ಅಂಗ್ರೋಳಿ, ವಿಠ್ಠಲ ಗಡ್ಡಿ ಇತರರಿದ್ದರು.

ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಮೋದ್ ಮುತಾಲಿಕ ಮಾತನಾಡಿದರು. ರವಿ ಕೋಕಿತ್ಕರ್, ವಿನಯ ಅಂಗ್ರೋಳಿ, ವಿಠ್ಠಲ ಗಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net