

ಗೋಕರ್ಣ: ಇಲ್ಲಿನ ಹುಳಸೆಕೇರಿ ಹಾಲಕ್ಕಿ ಸಮಾಜದ ವತಿಯಿಂದ ಸಂಕ್ರಾಂತಿ ನಿಮಿತ್ತ ವಾರ್ಷಿಕ ಭಜನಾ ಉತ್ಸವ ಶನಿವಾರ ನಡೆಯಿತು. ತನ್ನಿಮಿತ್ತ ತಾರಮಕ್ಕಿಯಲ್ಲಿನ ಶ್ರೀಕೇತಕಿ ವಿನಾಯಕ ಮಂದಿರದಲ್ಲಿ ವಿಶೇಷ ಹೂನಂಗಿ ಪೂಜೆ ಮತ್ತು ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಏರ್ಪಡಿಸಲಾಯಿತು.
ಸ್ಥಳೀಯ ಪದ್ಧತಿಯಂತೆ ‘ಕದಳೀ-ಹರಣ’ ಕಾರ್ಯಕ್ರಮದಲ್ಲಿ ಎತ್ತರದ ಮಾವಿನ ತೋರಣಕ್ಕೆ ಕಟ್ಟಲಾಗಿದ್ದ ಬಾಳೆ ಹಣ್ಣುಗಳನ್ನು ಯುವಕರು ತೆಗೆದು ಸಂಭ್ರಮಿಸಿದರು. ನಂತರ ಸಮಾಜದ ಪ್ರಮುಖರು ಮತ್ತು ಬುದವಂತರಿಂದ ಒಡಗೂಡಿದ ಭಜನಾ ಮೇಳವು ಕೋಟಿತೀರ್ಥ ಮೂಲಕ ವಿವಿಧ ಮಂದಿರಗಳನ್ನು ಭೇಟಿಯಿತ್ತು ಪ್ರಾರ್ಥನೆ ಸಲ್ಲಿಸಿತು. ಮಧ್ಯಾಹ್ನ ಶ್ರೀಕೇತಕಿ ವಿನಾಯಕ ಸನ್ನಿಧಿಯಲ್ಲಿ ಹೊಸದಾಗಿ ಬೆಳೆಯಲಾದ ಹೊಸಕ್ಕಿ ಪಾಯಸದ ಸಾರ್ವಜನಿಕ ಭೋಜನದೊಂದಿಗೆ ಸಮಾರಂಭ ಸಂಪನ್ನವಾಯಿತು.