ವಚನ ಸಾಹಿತ್ಯ ಸಂರಕ್ಷಣೆಗೆ ಹಳಕಟ್ಟಿ ಕೊಡುಗೆ ಅಪಾರ, ಡಾ. ಸಿ. ಕೆ. ನಾವಲಗಿ ಮೆಚ್ಚುಗೆ

Screenshot_2023-07-02-20-04-26-27.jpg
Published on

ಬೆಳಗಾವಿ: ಡಾ.ಫ.ಗು. ಹಳಕಟ್ಟಿ ಅವರು ವಕೀಲ ವೃತ್ತಿ ಮಾಡುತ್ತ ಸಂಶೋಧನೆ ಮೈಗೂಡಿಸಿಕೊಂಡು ವಚನಗಳನ್ನು ಸಂಗ್ರಹಿಸಿ, ಸಂಪಾದನೆ ಮಾಡಿ ಅವುಗಳನ್ನು ಎಲ್ಲರಿಗೂ ತಲುಪಿಸುವ ಮೂಲಕ ಸಮಾಜದಲ್ಲಿ ಸಮಾನತೆ ಸಾರಿದರು ಎಂದು ಚಿಂತಕ, ಲೇಖಕ ಡಾ. ಸಿ.ಕೆ. ನಾವಲಗಿ ಅವರು ಅಭಿಪ್ರಾಯಪಟ್ಟರು.
 ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನರ ಪಾಲಿಕೆಯ ವತಿಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ಫ.ಗು ಹಳಕಟ್ಟಿಯವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸಿವುದರ ಜತೆಗೆ ಸಾಹಿತ್ಯ ಧಾರ್ಮಿಕ ಸಂಸ್ಕೃತಿ, ಶಿಕ್ಷಣ, ಸಹಕಾರಿ ಕ್ಷೇತ್ರ, ಹೀಗೇ ಹತ್ತು-ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿ ಸಮಾಜಕ್ಕೆ ಅವರದೇ ಆದ ಕೊಡುಗೆ ನೀಡಿ ವಚನಗಳ ಪಿತಾಮಹ ಎಂದು ಬಿರುದು ಪಡೆದರು. ಸಮಾಜದಲ್ಲಿ ಜಾತಿ, ಮತ ಧರ್ಮ ಪಂಥ, ಪಂಗಡ ಭೇದ-ಭಾವ ಇವುಗಳು ಕೇವಲ ಬರವಣಿಗೆ, ಪುಸ್ತಕ, ಭಾಷಣಗಳಾದೆ ಇರುವಿಕೆ ಆದಾಗ ಮಾತ್ರ ಇಂತಹ ಅನೇಕ ಶರಣರ ಜಯಂತಿಗಳು ಸ್ಫೂರ್ತಿದಾಯಕ ಆಗುತ್ತವೆ ಎಂದರು.
 ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ ಮಾತನಾಡಿ, ಶರಣರ ಜಯಂತಿಗಳಿಗೆ ಎಲ್ಲ ಸಮಾಜ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶರಣರ ಜೀವನ ಶೈಲಿ, ವಿಚಾರ, ತತ್ವ-ಸಿದ್ಧಾಂತಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡರೆ ಮಾತ್ರ ಸಮಾಜದ ಅಭಿವೃದ್ಧಿಯಾಗುವುದು ಎಂದರು.
 ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಉಪ ವಿಭಾಗಾಧಿಕಾರಿ ಬಲರಾಮ ಚವ್ಹಾಣ, ಅಶೋಕ ಮಳಗಲಿ, ಮೋಹನ ಗುಂಡ್ಲೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net