ಹೊಸಮಠದಲ್ಲಿ ಡಾ.ಫ.ಗು. ಹಳಕಟ್ಟಿ ಜನ್ಮ ದಿನಾಚರಣೆ

Halakatti's birthday celebration at Hosamutt
Published on

ಮೈಸೂರು: ವಚನ ಸಾಹಿತ್ಯ ಸಂರಕ್ಷಣೆಗೆ ಗಣನೀಯ ಕೊಡುಗೆ ನೀಡಿದ ಡಾ.ಫ.ಗು ಹಳಕಟ್ಟಿ ಅವರನ್ನು ‘ವಚನ ಸಾಹಿತ್ಯ ಪಿತಾಮಹ’ ಎಂದು ಕರೆದಿರುವುದು ಅರ್ಥಪೂರ್ಣ. ಬಹುಶಃ ಇದಕ್ಕಿಂತ ದೊಡ್ಡ ಶಬ್ದ ಏನಾದರು ಇದ್ದರೆ ಅದಕ್ಕೆ ಅವರು ಅರ್ಹರು ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಮತ್ತು ವಿಜಯಪುರದ ವಚನಸಂಗ್ರಹ ಪಿತಾಮಹ ಡಾ.ಫ.ಗು ಹಳಕಟ್ಟಿ ಸಂಶೋಧನ ಕೇಂದ್ರ ವತಿಯಿಂದ ನಗರದ ನಟರಾಜ ಪ್ರತಿಷ್ಠಾನದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಫ.ಗು. ಹಳಕಟ್ಟಿ ಜಯಂತ್ಯುತ್ಸವ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಶೋಧನೆ ಎನ್ನುವುದು ಅದರ ವ್ಯಾಖ್ಯಾನ, ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗಿದೆ, ಆಲೋಚನಾ ಮಜಲು ಬದಲಾಗುತ್ತಿವೆ. ಬದಲಾದ ಕಾಲಘಟ್ಟದಲ್ಲಿ ಅರ್ಥೈಸುವಿಕೆಯಲ್ಲಿ ವ್ಯತ್ಯಾಸಗಳು ಕಾಣಿಸುತ್ತಿವೆ. ಒಂದು ಕಾಲಕ್ಕೆ ಸಂಶೋಧನೆ ಎಂದರೆ ಮುಚ್ಚಿ ಹೋಗಿರುವುದನ್ನು ಕೆದಕಿ ಹೊರತೆಗೆಯುವುದು ಎಂಬುದಾಗಿತ್ತು ಎಂದು ತಿಳಿಸಿದರು.

ನನ್ನ ಸಂಶೋಧನಾ ದಿನಗಳಲ್ಲಿ ನಾನು ಫ.ಗು. ಹಳಕಟ್ಟಿ ಅವರ ವಚನ ಸಂಗ್ರಹವನ್ನು ಓದಿದಾಗ ಅದರಲ್ಲೇನಿದೆ ಎಂಬ ಭಾವನೆ ಮೂಡಿತ್ತು. ಈ ರೀತಿಯ ಚಿಂತನೆಗಳು ಅರೆಬರೆ ತಿಳುವಳಿಗಳು ನಮ್ಮ ಅವಿವೇಕಕ್ಕೆ ಎಡೆ ಮಾಡಿಕೊಡುತ್ತದೆ. ಚರಿತ್ರೆಯಲ್ಲಾದಂತಹ ಬದಲಾವಣೆಗಳ ಪರಿಪೂರ್ಣ ಜ್ಞಾನ ಇಲ್ಲದಿದ್ದಾಗ ಅಪವ್ಯಾಖ್ಯಾನಗಳಿಗೆ ಆಸ್ಪದವಾದಗುತ್ತವೆ. ವಿಚಾರ ಮತ್ತು ವಿಷಯದಲ್ಲಿ ಹೆಚ್ಚಿನ ತಿಳಿವಳಿಕೆ, ವೈಶ್ಯಾಲ್ಯತೆ ನಾವು ಬೆಳೆದಂತೆ ದಕ್ಕುತ್ತಾ ಹೋಗುತ್ತದೆ. ಹಳಕಟ್ಟಿ ಅವರ ಬಗ್ಗೆ ನನಗೆ ಮೊದಲಿಗೂ ನಂತರದ ಗ್ರಹಿಕೆಗೂ ವ್ಯತ್ಯಾಸಗಳಿವೆ. ಹಳಕಟ್ಟಿ ಅವರನ್ನು ವಚನ ಪಿತಾಮಹ ಎಂದು ಕರೆಯಲಾಗುತ್ತೆ. ಆದರೆ ಅವರ ಕುರಿತು ನಾನು ಅಧ್ಯಯನ ನಡೆಸಿದ ನಂತರ ನನ್ನ ಗ್ರಹಿಕೆಗೆ ಅವರು ವಚನ ಸಾಹಿತ್ಯದ ಚಿನ್ನದ ಗಣಿಕಾರರಾಗಿ ಕಾಣಿಸುತ್ತಾರೆ ಎಂದರು.

ಸಂಶೋಧನಾ ಕ್ಷೇತ್ರದಲ್ಲಿ ಸಂಗ್ರಹಕಾರರಿಗೆ ಇಂದಿಗೂ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ. ಸಂಶೋಧಕರು, ವಿಮರ್ಶಕರು, ಸಾಹಿತಿಗೆ ದೊರೆಯುವ ಸ್ಥಾನಮಾನ ಸಂಗ್ರಹ ಹಾಗೂ ಸಂಪಾದನೆ ಮಾಡುವ ವಿದ್ವಾಂಸರಿಗೆ ದೊರೆಯುತ್ತಿಲ್ಲ. ಸಂಪಾದನೆ ಕಾರ್ಯ ಅತ್ಯಂತ ಕುಸುರಿಯ ಕೆಲಸವಾದರೂ ಸಂಗ್ರಹಕಾರರನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಳಕಟ್ಟಿ ಅವರ ವಚನ ಸಂಪಾದನೆಯನ್ನು ಅವೈಜ್ಞಾನಿಕ ಎಂದು ಹೇಳುವುದು ಸಮಂಜಸವಲ್ಲ. ಸಾವಿರ ಕೃತಿಗಳನ್ನು ಮೊದಲು ಹೊರತರುವ ತವಕ ಅವರಲ್ಲಿ ಇತ್ತೇ ವಿನಹ, ಕೂಲಂಕಷವಾಗಿ ನೀಡುವುದಲ್ಲ. ಸಾವಿರ ಕೃತಿಗಳನ್ನು ಪ್ರಕಟಿಸಿ ಹೊರಹಾಕುವುದೆಂದರೆ ಅದು ಅತ್ಯಂತ ದೊಡ್ಡ ಕೆಲಸ. ಅಂತಹ ಕಾರ್ಯದಲ್ಲಿ ಅಲ್ಲಲ್ಲಿ ಕೆಲವೊಂದು ಲೋಪಗಳು ಆಗಿರಬಹುದು. ಹಾಗಂತ ವಚನ ಸಂಪಾದನೆ ವೈಜ್ಞಾನಿಕವಲ್ಲ ಎನ್ನುವುದು ಅಪರಾಧ ಎಂದರು.

ಡಾ.ಫ.ಗು ಹಳಕಟ್ಟಿ ಕುರಿತಾದ ಕೃತಿ ಹೊರತಂದ ಕೃತಿಯನ್ನು ಗಾವಡಗೆರೆಯ ಶ್ರೀ ಗುರುಲಿಂಗ ಜಂಗಮ ಮಠ ಶ್ರೀ ನಟರಾಜ ಸ್ವಾಮೀಜಿ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಶ್ರೀ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಪಾಂಡವಪುರದ ಶ್ರೀ ರಾಮ ಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ, ನಟರಾಜ ಪ್ರತಿಷ್ಠಾನ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಜಾಗತಿಕ ಲಿಂಗಾಯ ಮಹಾಸಭಾ ಜಿಲ್ಲಾಧ್ಯಕ್ಷ ಮಹಾದೇವಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net