

ಉಡುಪಿ: ವಚನಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಪ್ರತಿಕ. ತತ್ವ ಸಿದ್ದಾಂತವನ್ನು ಜನಸಾಮಾನ್ಯರಿಗೆ ಸರಳವಾಗಿ ಮನದಟ್ಟು ಮಾಡುವಲ್ಲಿ ವಚನ ಸಾಹಿತ್ಯ ಬಹಳ ಪ್ರಮುಖವಾಗಿದೆ. ಡಾ.ಫ.ಗು ಹಳಕಟ್ಟಿ ವಚನಗಳನ್ನು ಸಂಗ್ರಹಿಸಿ ಶರಣರ ವಚನಗಳ ಪ್ರಚಾರ ಮಾಡಲು ಬದುಕನ್ನು ಮುಡಿಪಾಗಿಟ್ಟವರು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಹೇಳಿದರು.
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು.
ವಚನ ಸಾಹಿತ್ಯಗಳು ಸಮಾಜದಲ್ಲಿ ಅನೇಕ ರೀತಿಯಲ್ಲಿ ಸುಧಾರಣೆಯನ್ನು ತಂದಿದ್ದು, ಇಂತಹ ವಚನಗಳನ್ನು ಸಂಶೋಧಿಸಿ ಅವುಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅದ್ಭುತ ಕೆಲಸವನ್ನು ಡಾ.ಫ.ಗು.ಹಳಕಟ್ಟಿ ಮಾಡಿದ್ದಾರೆ. ಅವರ ಕಾರ್ಯ ನೆನೆಯುವ ಉದ್ದೇಶದಿಂದ ಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ವಚನ ಸಾಹಿತ್ಯವು ಪ್ರಜಾಪ್ರಭುತ್ವವಾದಿ ನಿಲುವಿನ ಸಾಹಿತ್ಯ. ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡ ಸಾಹಿತ್ಯವಾಗಿದೆ. ಬಸವಾದಿ ಶಿವಶರಣೆಯರ ವಚನಗಳನ್ನು ವಿದ್ಯಾರ್ಥಿಗಳು ಓದಿ ಅವುಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಡಾ.ಟಿ.ಎಂ.ಎ ಪೈ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್ ಮಾತನಾಡಿ, ಅತ್ಯಂತ ಸರಳ ಜೀವನ ಜೀವಿಸಿದ ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ತಮ್ಮ ಸ್ವಂತ ಹಣದಿಂದ ಮುದ್ರಣ ಮಾಡುವುದರೊಂದಿಗೆ, ವಚನಗಳಿಗೆ ಬಿಡುಗಡೆ ಭಾಗ್ಯ ಒದಗಿಸಿದರು. ಕನ್ನಡ ಸಾಹಿತ್ಯದ ಏಳಿಗೆಗಾಗಿ ಶ್ರಮಿಸುವುದರ ಜೊತೆಗೆ ಕರ್ನಾಟಕದ ಏಕೀಕರಣಕ್ಕಾಗಿ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸಿದ್ದಾರೆ ಎಂದರು.
ತೆಂಕನಿಡಿಯೂರು ಕಾಲೇಜು ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ. ನಿರಂಜನ್, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಮತ್ತಿತರರು ಉಪಸ್ಥಿತರಿದ್ದರು. ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ರಾಮಾಂಜಿ ನಿರೂಪಿಸಿದರು. ತೆಂಕನಿಡಿಯೂರು ಪಪೂ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ವಂದಿಸಿದರು.