

ಹುಬ್ಬಳ್ಳಿ: ಇಲ್ಲಿಯ ದುರ್ಗದಬೈಲ್ ಗೌಳಿ ಗಲ್ಲಿಯಲ್ಲಿ ಕೆಲವು ದಿನಗಳ ಹಿಂದೆ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಹಸು ಅಸುನೀಗಿ, ನೂರಾರು ವರ್ಷದ ಇತಿಹಾಸ ಹೊಂದಿದ ವಿಠ್ಠಲ ದೇವಸ್ಥಾನದ ಬೃಹತ್ ರಥ, ಬಟ್ಟೆ ಅಂಗಡಿ ಸುಟ್ಟು ಕರಕಲಾದ ಸ್ಥಳಕ್ಕೆ ಮಾಜಿ ಶಾಸಕ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಹಾಲಹರವಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ದೇವಸ್ಥಾನಕ್ಕೆ ನಾಲ್ಕು ಗೋವು, ಬೃಹತ್ ರಥವನ್ನು ನಿರ್ಮಿಸಿ ಕೊಡಬೇಕು, ಅಲ್ಲದೇ ನಷ್ಟಕ್ಕೆ ಒಳಗಾದ ಬಟ್ಟೆ ವ್ಯಾಪಾರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಒತ್ತಾಯಿಸಿದರು. ಅಗ್ನಿ ದುರಂತಕ್ಕೆ ಕಾರಣ ಪತ್ತೆ ಹಚ್ಚಲು ಸೂಕ್ತ ತನಿಖೆ ನಡೆಸಬೇಕೆಂದು ಮಾಜಿ ಶಾಸಕರು ಒತ್ತಾಯಿಸಿದರು.
ಪಾಲಿಕೆ ಮಾಜಿ ಸದಸ್ಯ ಹಾಗೂ ಶ್ರೀ ರಾಜಾ ಚಂದ್ರಗುಪ್ತ ಮೌರ್ಯ ಟ್ರಸ್ಟ್‌ನ ಹಿರಿಯರಾದ ಹೂವಪ್ಪ ದಾಯಗೋಡಿ, ಮರಾಠ ಸಮಾಜದ ಮುಖಂಡ ಹಾಗೂ ಶ್ರೀ ವೀರ ಛತ್ರಪತಿ ಯುವಸೇನೆಯ ಮುಖಂಡ ವಿಶಾಲ ವಾಘಮೋಡೆ, ಮುಖಂಡರಾದ ಶಿವಾನಂದ ಕರಿಗಾರ, ಶಿವಾನಂದ ಮುತ್ತಣ್ಣವರ, ಲಕ್ಷ್ಮಣ ವಾಘಮೋಡೆ, ಪಾಲಿಕೆ ಸದಸ್ಯೆ ಪೂಜಾ ಶೇಜವಾಡಕರ, ದುರ್ಗಾದೇವಿ, ದ್ಯಾಮವ್ವ ದೇವಿ, ಕರಿಯಮ್ಮದೇವಿ ದೇವಸ್ಥಾನದ ಮಹಿಳಾ ಕಮಿಟಿಯ ಸದಸ್ಯರು, ಇತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಶಾಸಕ ಮಹೇಶ ಟೆಂಗಿನಕಾಯಿ ಅವರು ಸಹ ಸ್ಥಳಕ್ಕೆ ಭೇಟಿ ನೀಡಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.