ಹಲಗೂರಿನ ವೀರಭದ್ರ ದೇವಸ್ಥಾನದ ಹುತ್ತಕ್ಕೆ ಪೂಜೆ

7hgr.1
Published on

ಹಲಗೂರು: ಸುಬ್ರಹ್ಮಣ್ಯ ಷಷ್ಟಿ ಹಬ್ಬವನ್ನು ಗ್ರಾಮದ ಜನರು ಭಕ್ತಿಯಿಂದ ಆಚರಿಸಿದರು. ಮಹಿಳೆಯರು ಹುತ್ತಕ್ಕೆ ಹಾಲೆರೆಯುವ ಮೂಲಕ ಹಬ್ಬದ ವಿಶೇಷತೆಗೆ ಸಾಕ್ಷಿಯಾದರು. ಶನಿವಾರ ಮುಂಜಾನೆ ಗ್ರಾಮದ ಶ್ರೀ ವೀರಭದ್ರ ದೇವಸ್ಥಾನದ ಬಳಿ ಇರುವ ಹುತ್ತಕ್ಕೆ ಕುಟುಂಬ ಸಮೇತವಾಗಿ ಆಗಮಿಸಿದ ಭಕ್ತರು ಹುತ್ತಕ್ಕೆ ಹಾಲು , ಬೆಣ್ಣೆ ಎರೆದು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿದರು. ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದ ಖಿಚಡಿ, ಗೊಜ್ಜು, ವಡೆ ಮತ್ತು ಪಾಯಸಗಳನ್ನು ತಂದು ನೈವೇದ್ಯ ಸಮರ್ಪಿಸಿದರು. ಮಾತೆಯರು ಬೆಳಗಿನಿಂದ ಉಪವಾಸ ಇದ್ದು ಹುತ್ತಕ್ಕೆ ವಿವಿಧ ರೀತಿಯ ಪೂಜೆ ಸಲ್ಲಿಸಿ, ಸುಬ್ರಹ್ಮಣ್ಯ ದೇವರನ್ನು ಆರಾಧಿಸಿದ್ದು ಗಮನ ಸೆಳೆಯಿತು.

ಪುಷ್ಪಾಲಂಕಾರ: ಶ್ರೀ ವೀರಭದ್ರ ದೇವಸ್ಥಾನದ ಅರ್ಚಕ ಚಂದ್ರು ಅವರು ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ಅನೇಕ ಭಕ್ತರು ನಾಗ ಸೇವೆಯನ್ನು ಮಾಡಿ, ನಾಗರಕಲ್ಲಿಗೆ ತನಿ ಎರೆದು ಭಕ್ತಿ ಸಲ್ಲಿಸಿದ್ದಾರೆ. ಎಲ್ಲರಿಗೂ ಆರೋಗ್ಯ ಮತ್ತು ನೆಮ್ಮದಿಯನ್ನು ದೇವರು ಕರುಣಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net