

ಬೆಳಗಾವಿ : ಸೋಲು ಗೆಲುವು ಮುಖ್ಯವಲ್ಲ. ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಿಕೆ ಮಹತ್ವದ್ದಾಗಿದೆ. ಆಸಕ್ತಿವಹಿಸಿ ಆಟವಾಡುವುದರಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ವೃದ್ಧಿಯಾಗಿ ಸದೃಢ ಆರೋಗ್ಯ ರೂಪಗೊಳ್ಳುತ್ತದೆ ಎಂದು ಬಿಇಒ ಎಸ್.ಪಿ.ದಾಸಪ್ಪನವರ ಹೇಳಿದರು.
ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಲಗಾ ಕೇಂದ್ರ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮಗುವಿನ ಬೌದ್ಧಿಕ ಬೆಳವಣಿಗೆ ಜತೆಗೆ ಭೌತಿಕ ಬೆಳವಣಿಗೆಯಾಗುವ ನಿಟ್ಟಿನಲ್ಲಿ ಕ್ರೀಡೆ, ಆಟೋಟಗಳಿಗೆ ಪ್ರೋತ್ಸಾಹ ನೀಡಬೇಕು. ಪ್ರಾಥಮಿಕ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುವಲ್ಲಿ ಶಿಕ್ಷಕರು ಶ್ರಮ ವಹಿಸಿ ಕಾರ್ಯ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಗೆಜಪತಿ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಮದಗೌಡ ಅವರು ಸಂಯುಕ್ತವಾಗಿ ಸರಸ್ವತಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಗಣಪತಿ ಮರೀಹಾಳಕರ, ಉಪಾಧ್ಯಕ್ಷ ಭುಜಂಗ ಸಾಲಗುಡೆ, ಸಿಆರ್‌ಪಿ ಎಫ್.ಎಸ್.ಮುಲ್ಲಾ, ಬಿಆರ್‌ಪಿ ಸುನಿಲ ಕುಟ್ರೆ, ಬಸವರಾಜ ಸುಣಗಾರ, ತಾಲೂಕಾ ಶಿಕ್ಷಕರ ಸೊಸೈಟಿ ಅಧ್ಯಕ್ಷ ಅನ್ವರ ಲಂಗೋಟಿ, ಬಿ.ಎನ್.ಅಲಾಬಾದಿ, ಸಿ ಬಿ ನಾಯ್ಕರ ಸೇರಿದಂತೆ ಇತರರಿದ್ದರು. ಶಿಕ್ಷಕರಾದ ಉಮೇಶ ಹಿರೇಮಠ ಸ್ವಾಗತಿಸಿದರು, ಆರ್.ಎಸ್.ಭಜಂತ್ರಿ ನಿರೂಪಿಸಿದರು, ಪಿ.ಎನ್.ಪಾಟೀಲ ವಂದಿಸಿದರು.