

ರಾಮನಗರ: ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇರುಳಿಗ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ 2005ಕ್ಕಿಂತ ಮುಂಚಿತವಾಗಿ ಒಕ್ಕಲೆಬ್ಬಿಸಿರುವ ಪರಿಶಿಷ್ಟ ಪಂಗಡದ ಅರಣ್ಯವಾಸಿಗಳಿಗೆ ಹಕ್ಕುಪತ್ರ ದೊರಕಿಸಿಕೊಡಲು ಹಲವಾರು ಹೋರಾಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ. 2014-15ರಲ್ಲಿ ಅರಣ್ಯ ಜಮೀನಿಗೆ ಸಂಬಂಧಿಸಿದಂತೆ ಈ ಪಂಗಡದ 1,795 ಮಂದಿ ಅರ್ಜಿ ಸಲ್ಲಿಸಿದ್ದರು, ಇವರಲ್ಲಿ 2019ರ ವೇಳೆಗೆ 413 ಮಂದಿಗೆ ಹಕ್ಕುಪತ್ರ ನೀಡಿದ್ದು, 213 ಅರ್ಜಿಗಳು ತಿರಸ್ಕೃತಗೊಂಡಿವೆ. 1,170 ಅರ್ಜಿಗಳು ಬಾಕಿ ಉಳಿದಿವೆ. ಆದರೆ, 625 ಅರ್ಜಿಗಳ ಮಾಹಿತಿಯೇ ಇಲ್ಲವಾಗಿದೆ. ಆದರೆ ಅಧಿಕಾರಿಗಳು ಅರಣ್ಯವಾಸಿಗಳು ವಾಸವಿದ್ದ ಸ್ಥಳದಲ್ಲಿ ದೊರೆಯುವ ದಾಲೆಗಳನ್ನು ಪರಿಗಣಿಸದೆ, ಪೇಪರ್ ದಾಖಲೆಗಳನ್ನು ನೀಡುವಂತೆ ಕೇಳುತ್ತಾರೆ. ಆದರೆ, ಅರಣ್ಯವಾಸಿಗಳು ಅನಕ್ಷರಸ್ಥರಾಗಿದ್ದು, ಅವರ ಬಳಿ ಯಾವುದೇ ದಾಖಲೆಗಳಿಲ್ಲ. ಅಲ್ಲದೆ, 2016ರ ಅರಣ್ಯ ಹಕ್ಕು ಕಾಯ್ದೆ ನಿಯಮ 13 (1) ರಲ್ಲಿ ಎ-ಐವರೆಗೂ ಇರುವ ದಾಖಲೆಗಳಲ್ಲಿ ಕೇವಲ ಎರಡನ್ನು ಮಾತ್ರ ಸಾಕ್ಷ್ಯಗಳೆಂದು ಪರಿಗಣಿಸಿ ಹಕ್ಕುಪತ್ರ ನೀಡುವಂತೆ ತಿಳಿಸಿದ್ದರೂ ಸಂಬಂಧಪಟ್ಟ ಇಲಾಖೆಗಳು ಹಕ್ಕುಪತ್ರ ನೀಡದೆ ಲೋಪ ಎಸಗುತ್ತಿದ್ದಾರೆ ಎಂದು ದೂರಿದರು.
ಕಾನೂನು ಬಾಹಿರವಾಗಿ ಅರಣ್ಯದಿಂದ ಅರಣ್ಯವಾಸಿಗಳನ್ನು ಹೊರಹಾಕಿರುವುದಕ್ಕೆ ಪುರ್ನವಸತಿ ಕಲ್ಪಿಸಬೇಕು ಎನ್ನುವ ನಿಯಮವಿದ್ದರೂ ಅಧಿಕಾರಿಗಳು ಪಾಲಿಸುತ್ತಿಲ್ಲ. ಹೀಗೆ ಹಲವಾರು ವಿಷಯಗಳಲ್ಲಿ ಅರಣ್ಯವಾಸಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕೃಷ್ಣಮೂರ್ತಿ ಆರೋಪಿಸಿದರು.
ಸಾಕ್ಷ್ಯ ಒಪ್ಪದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ: ಜಿಲ್ಲಾಡಳಿತ ಮತ್ತು ಸರ್ಕಾರ ಅರಣ್ಯದಲ್ಲಿರುವ ಸಾಕ್ಷೃಗಳನ್ನು ಮರು ಪರಿಶೀಲನೆ ಮಾಡಬೇಕು, ತಿರಸ್ಕರಿಸಿರುವ ಮತ್ತು ಬಾಕಿ ಅರ್ಜಿಗಳನ್ನು ಕೂಡಲೇ ವಿಲೇ ಮಾಡಿ ಸರ್ವೇ ಮಾಡಬೇಕು ಹಾಗೂ ಗ್ರಾಮಸಭೆ ನಡೆಸಬೇಕು, ಅರಣ್ಯಪ್ರದೇಶದಲ್ಲಿ ಇರುವ ಸಾಕ್ಷೃಗಳನ್ನು ಒಪ್ಪದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಮಾಹಿತಿ ಕೊರತೆ ಇದ್ದ ಕಡೆಗಳಲ್ಲಿ ಹೊಸದಾಗಿ ನಮೂನೆ ಎ, ಬಿ, ಸಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು, ಬುಡಕಟ್ಟು ಸಮುದಾಯದ ಪ್ರತಿ ಗ್ರಾಮದಲ್ಲಿಯೂ ಅರಣ್ಯ ಹಕ್ಕು ಸಮಿತಿ ರಚನೆ ಮಾಡಬೇಕು, ಉಪವಿಭಾಗ ಮತ್ತು ಜಿಲ್ಲಾ ಮಟ್ಟದ ಅರಣ್ಯ ಸಮಿತಿಗಳಲ್ಲಿ ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ ಅರಿವಿರುವ ಮೂಲ ಅರಣ್ಯ ನಿವಾಸಿಗಳನ್ನೇ ಸದಸ್ಯರಾಗಿ ನೇಮಕ ಮಾಡಬೇಕು, ಸರ್ವೇ ಮಾಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣಮೂರ್ತಿ ಒತ್ತಾಯಿಸಿದರು.