

ಮಂಡ್ಯ: ಹೊಸ ಕಂದಾಯ ಗ್ರಾಮಗಳ ರಚನೆಯಿಂದ ಗ್ರಾಮಸ್ಥರಿಗೆ ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ, ರಸ್ತೆ, ಶಾಲೆಗಳು ಸೇರಿದಂತೆ ಮೂಲ ಸೌಕರ್ಯ ಸಿಗಲಿದೆ. ಇದರಿಂದ ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಹೊಸ ಕಂದಾಯ ಗ್ರಾಮದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟನೆ ಮಾತನಾಡಿದರು. ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ 117 ಕಂದಾಯ ಗ್ರಾಮಗಳ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.
ಜಮೀನು ಅಥವಾ ನಿವೇಶನಗಳಲ್ಲಿ ವಾಸ ಮಾಡುತ್ತಿರುವವರು ಸರ್ಕಾರದ ದಾಖಲೆಗಳನ್ನ ಪಡೆದುಕೊಳ್ಳಬೇಕು. ಇದರಿಂದ ಜಮೀನಿನ ಮಾಲೀಕತ್ವವನ್ನ ನಿಖರವಾಗಿ ಗುರುತಿಸಿಕೊಂಡು ದಾಖಲೆಯನ್ನು ಇಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಬಹಳ ಸಹಾಯವಾಗಲಿದೆ. ಜತೆಗೆ ಮುಂದಿನ ಪೀಳಿಗೆಗೆ ವರ್ಗವಣೆ ಮಾಡುವುದಕ್ಕೂ ಅನುಕೂಲವಾಗುತ್ತದೆ. ಕಂದಾಯ ಇಲಾಖೆಯು ನೇರವಾಗಿ ಸಾರ್ವಜನಿಕರೊಂದಿಗೆ ಸಂಪರ್ಕವಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರು ಮಾತನಾಡಿ, ಕಂದಾಯ ಗ್ರಾಮ ರಚನಾ ಕೋಶ ಸ್ಥಾಪನೆಯ ಪರಿಣಾಮ ದಾಖಲೆ ರಹಿತ ಇದ್ದ ಗ್ರಾಮಗಳ ರಚನೆಯಾಗಿದೆ. ಇದರಿಂದ ಅರ್ಹ ಎಲ್ಲರಿಗೂ ಹಕ್ಕುಪತ್ರ ಹಾಗೂ ಮೂಲ ಸೌಕರ್ಯಗಳು ಸಿಗಲಿವೆ. ಹೊಸ ಕಂದಾಯ ಗ್ರಾಮದಲ್ಲಿ ಹಕ್ಕುದಾರರಿಗೆ ಹಕ್ಕು ಪತ್ರ ನೀಡಲು ರಾಜ್ಯಾದ್ಯಂತ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿತ್ತು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಎಚ್.ಎಸ್.ಕೀರ್ತನಾ, ತಹಸೀಲ್ದಾರ್ ವಿಜಯಕುಮಾರ್ ಇತರರಿದ್ದರು.