

ವಿಜಯವಾಣಿ ಸುದ್ದಿಜಾಲ ಗುರುಪುರ
ಫದು ವರ್ಷಗಳ ಹಿಂದೆ ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ನ ಸರ್ವೇ ನಂಬರ್ 133ರಲ್ಲಿ ಸಂಭವಿಸಿದ ಭಾರಿ ಗುಡ್ಡ ಕುಸಿತ ದುರಂತದಲ್ಲಿ ಮನೆ-ಮಠ ಕಳೆದುಕೊಂಡಿದ್ದ 11 ಕುಟುಂಬಗಳ ಪೈಕಿ 6 ಕುಟುಂಬಗಳಿಗೆ ಬುಧವಾರ ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ನಿವೇಶನಸಹಿತ ಹಕ್ಕುಪತ್ರ ವಿತರಿಸಿದರು.
ಡಾ.ಭರತ್ ಶೆಟ್ಟಿ ಮಾತನಾಡಿ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ನಿವೇಶನ ಮತ್ತು ಹಕ್ಕುಪತ್ರ ಒದಗಿಸಿಕೊಡುವಲ್ಲಿ ಪಂಚಾಯಿತಿ ಎಲ್ಲ ಸದಸ್ಯರು ಪಕ್ಷಾತೀತವಾಗಿ ಶ್ರಮಿಸಿದ್ದಾರೆ. ಪಂಚಾಯಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳ ಶ್ರಮವೂ ಇದೆ. ಮನೆ ಕಳೆದುಕೊಂಡ ಮಠದಗುಡ್ಡೆಯ ಸಂತ್ರಸ್ತರಿಗೆ ಈ ಹಿಂದೆ ಗಂಜಿಮಠ ಮತ್ತು ನೀರುಮಾರ್ಗ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ನೋಡಿದ್ದರೂ ಅಲ್ಲಿನ ನಾಗರಿಕರು ಅನ್ಯ ಗ್ರಾಮವಾಸಿಗಳಿಗೆ ನಿವೇಶನ ನೀಡುವಲ್ಲಿ ಆಕ್ಷೇಪವೆತ್ತಿದ್ದರು. ಹಾಗಾಗಿ ಆ ಪ್ರಸ್ತಾವ ಕೈಬಿಡಲಾಗಿತ್ತು. ತಾಂತ್ರಿಕ ತೊಡಕು ನಿವಾರಿಸಿ ಉಳಿದ 5 ಕುಟುಂಬಗಳಿಗೆ ಶೀಘ್ರ ಹಕ್ಕುಪತ್ರ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ತಾಪಂ ಗುರುಪುರದ ಅಶ್ವಿತಾ ಎಂಬುವರಿಗೆ ಒದಗಿಸಿದ್ದ ಶ್ರವಣದೋಷ ನಿವಾರಣೆ ಉಪಕರಣ ಹಾಗೂ ಮನೆ ಕಳೆದುಕೊಂಡ ಸಂತಸ್ತರಾದ ಭಾಗ್ಯಮ್ಮ, ಜಯಮ್ಮ, ಚಂದ್ರಾವತಿ, ಆತಿಕಾ, ಮುಹಮ್ಮದ್(ಮಾಮಾಕ) ಮತ್ತು ರಮ್ಲತ್ ಅವರಿಗೆ ಹಕ್ಕುಪತ್ರ ವಿತರಿಸಲಾಯಿತು. ಪಂಚಾಯಿತಿ ಅಧ್ಯಕ್ಷೆ ಸಫರಾ ಮದಕ, ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ಪಂಕಜಾ ಶೆಟ್ಟಿ ನಿರೂಪಿಸಿದರು.
ಘಟನೆ ಹಿನ್ನೋಟ: 2020ರ ಜುಲೈ 5ರಂದು ಧಾರಾಕಾರ ಸುರಿಯುತ್ತಿದ್ದ ಮಳೆಗೆ ಗುರುಪುರ ಗ್ರಾಪಂ ವ್ಯಾಪ್ತಿಯ ಮಠದಗುಡ್ಡೆ ಸೈಟ್ನ ಸರ್ವೇ ನಂಬರ್ 133ರಲ್ಲಿದ್ದ ಹಲವು ಮನೆಗಳು ಕುಸಿದು ಬಿದ್ದಿದ್ದವು. ಅಂದು ಸ್ಥಳೀಯ ನಿವಾಸಿ ಮುಹಮ್ಮದ್ ಯಾನೆ ಮಾಮಾಕ ಎಂಬುವರ ಮನೆಗೆ ನೆಂಟರಾಗಿ ಆಗಮಿಸಿದ್ದ ಅಡ್ಡೂರು ಗ್ರಾಮದ ತಾರಿಕರಿಯ ನಿವಾಸಿ ಮುಹಮ್ಮದ್ ಶರೀಫ್, ಅವರ ಪತ್ನಿ ಹಾಗೂ ಇತರ ನಾಲ್ವರು ಮನೆಯಲ್ಲಿದ್ದರು. ಗುಡ್ಡ ಕುಸಿತ ಸಂಭವಿಸಿದ ವೇಳೆ ಮನೆಯೊಳಗಿದ್ದ ಇತರರು ಹೊರಗೆ ಓಡಿ ಬಂದಿದ್ದರು, ಶರೀಫ್ ಅವರ ಮಕ್ಕಳಾದ ಸಫಾನ್(17) ಮತ್ತು ಸಹಲಾ(8) ಮಣ್ಣಿನಡಿಗೆ ಬಿದ್ದು ಮೃತಪಟ್ಟಿದ್ದರು. ದುರಂತದಲ್ಲಿ ಮಠದಗುಡ್ಡೆ ಸೈಟ್ನಲ್ಲಿದ್ದ 50ಕ್ಕೂ ಹೆಚ್ಚು ಕುಟುಂಬಗಳ ಜನರು ನಿರಾಶ್ರಿತರಾಗಿದ್ದರು. ಮೃತ ಮಕ್ಕಳಿಗೆ ಸರ್ಕಾರದಿಂದ ಪರಿಹಾರ ಸಿಕ್ಕಿದ್ದರೂ, ಮನೆ ಕಳೆದುಕೊಂಡು ಬೀದಿಪಾಲಾಗಿದ್ದ ಮುಹಮ್ಮದ್ ಯಾನೆ ಮೋನಾಕ ಅವರಿಗೆ 10 ಸಾವಿರ ಹೊರತುಪಡಿಸಿ ಇತರ ಯಾವುದೇ ಪರಿಹಾರ ಸಿಕ್ಕಿಲ್ಲ. ಆದರೆ 5 ವರ್ಷದ ಬಳಿಕ ನಿವೇಶನಸಹಿತ ಹಕ್ಕುಪತ್ರ ಸಿಕ್ಕಿದೆ.
ಸಂತ್ರಸ್ತರು ಸಂತೃಪ್ತರಾಗಿಲ್ಲ: 11 ಕುಟುಂಬಗಳ ಪೈಕಿ 6 ಕುಟುಂಬಗಳಿಗೆ ಈಗ ಮಠದಗುಡ್ಡೆ ಸೈಟ್ನ ಸರ್ವೇ ನಂಬರ್ 102/1ಎ1ಎಫ್3ಯಲ್ಲಿ ತಲಾ 2.15 ಸೆಂಟ್ಸ್ ನಿವೇಶನದೊಂದಿಗೆ ಹಕ್ಕುಪತ್ರ ಸಿಕ್ಕಿದೆ. ನೆಬಿಸಾ ಇಸ್ಮಾಯಿಲ್, ಸಕಿನಾ, ಜಮೀಲಾ, ಸಲ್ಮತ್ ಮತ್ತು ನೆಬಿಸಾ ಎಂಬುವರಿಗೆ ಇದೇ ಸರ್ವೇ ನಂಬರ್ನಲ್ಲಿ ತಲಾ 2.15 ಸೆಂಟ್ಸ್ ನಿವೇಶನ ಗುರುತಿಸಲಾಗಿದ್ದರೂ, ತಾಂತ್ರಿಕ ತೊಡಕಿಂದ ಹಕ್ಕುಪತ್ರ ಸಿಕ್ಕಿಲ್ಲ. ಈ 5 ಕುಟುಂಬ ಸದಸ್ಯರು ಸಂಬಂಧಿಕರು, ಬಾಡಿಗೆ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.
ಇನ್ನು ಎಷ್ಟು ಬಾರಿ, ಇಲಾಖೆಗಳಿಗೆ ಅಲೆದಾಡಬೇಕೋ ಗೊತ್ತಿಲ್ಲ. ಈವರೆಗೆ 5 ವರ್ಷ ಅಲೆದಾಟ ಆಯಿತು. ಪಂಚಾಯಿತಿ, ಸರ್ಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ಕಷ್ಟಕ್ಕೆ ಶೀಘ್ರ ಸ್ಪಂದಿಸುವ ಭರವಸೆ ಇದೆ ಎಂದು ಮನೆ ಕಳೆದುಕೊಂಡ ನೆಬಿಸಾರ ಪತಿ ಇಸ್ಮಾಯಿಲ್ ಮಠದಗುಡ್ಡೆ ಬೇಸರ ವ್ಯಕ್ತಪಡಿಸಿದರು.
ಖಂಡಿತವಾಗಿಯೂ ಇದು ಸಂತೋಷಪಡುವ ಕಾರ್ಯಕ್ರಮವಲ್ಲ. ಮನೆ ಕಳೆದುಕೊಂಡ ಸಂತ್ರಸ್ತರು 5 ವರ್ಷದಿಂದ ಸಾಕಷ್ಟು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ್ದಾರೆ. ಪಂಚಾಯಿತಿ ಸಹಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ತಮ್ಮ ನೋವು-ಕಷ್ಟ ಹೇಳಿಕೊಂಡಿದ್ದರು. ಬಹಳಷ್ಟು ವಿಳಂಬವಾಗಿ ನಿವೇಶನಸಹಿತ ಹಕ್ಕುಪತ್ರ ಸಿಗುತ್ತಿದೆ. ಉಳಿದ 5 ಕುಟುಂಬಗಳಿಗೆ ಶೀಘ್ರ ಹಕ್ಕುಪತ್ರ ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ಸಫರಾ ಮದಕ ಅಧ್ಯಕ್ಷೆ, ಪಂಚಾಯಿತಿ https://www.vijayavani.net/ankura-program https://www.vijayavani.net/school-parliament-election-in-indraprastha-vidyalaya