

ಹರೀಶ್ ಮೋಟುಕಾನ, ಮಂಗಳೂರು
ದಶಕದಿಂದ ಅರಣ್ಯದಂಚಿನಲ್ಲಿ ಮನೆ ಕಟ್ಟಿಕೊಂಡು ವಾಸವಿರುವವರಿಗೆ 94ಸಿ ಅಡಿ ಹಕ್ಕುಪತ್ರ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದ್ದರೂ, ರಾಜ್ಯದಲ್ಲಿ ಸಾವಿರಾರು ಬಡವರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಇದಕ್ಕೆ ಕಾರಣ, ಅರಣ್ಯ ಹಾಗೂ ಕಂದಾಯ ಇಲಾಖೆಗಳ ನಡುವಿನ ಸಮನ್ವಯದ ಕೊರತೆ.
ಈ ಇಲಾಖೆಗಳು ಜಂಟಿ ಸರ್ವೆ ನಡೆಸುವಂತೆ ಸರ್ಕಾರ ಆದೇಶ ನೀಡಿ ಏಳು ವರ್ಷ ಕಳೆದರೂ, ಜನರಿಗೆ ನ್ಯಾಯ ದೊರಕಿಲ್ಲ. ಎರಡು ಇಲಾಖೆಗಳ ಜಟಾಪಟಿಯಿಂದ ಹಲವು ಕುಟುಂಬಗಳು ಹಕ್ಕುಪತ್ರ ಸಿಗದೆ ಸಂಕಷ್ಟಕ್ಕೆ ಸಿಲುಕಿವೆ. ಅರಣ್ಯ ಅಥವಾ ಅರಣ್ಯದಂಚಿನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಕುಟುಂಬಗಳಿಗೆ ತಮ್ಮ ಜಾಗವನ್ನು ಸಕ್ರಮ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿ, ಅರ್ಜಿ ಆಹ್ವಾನಿಸಿತ್ತು. ಆದರೆ ಇಂತಹ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯು ವುದು ಕಡ್ಡಾಯ. ಎನ್‌ಒಸಿ ಪಡೆಯಲು ಹೋದರೆ ಅರಣ್ಯ ಪ್ರದೇಶದಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ ಎಂದು ಅನೇಕ ಕಡೆಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಗಾದೆ ತೆಗೆಯುತ್ತಿದ್ದಾರೆ.
ರಾಜ್ಯದ ಅನೇಕ ಭಾಗಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವ ಕಾರಣ, ಹಲವು ಕುಟುಂಬಗಳಿಗೆ ಹಕ್ಕುಪತ್ರ ಸಿಗಲು ಕಾನೂನಿನ ಸಮಸ್ಯೆ ಎದುರಾಗಿದೆ. ಇದಕ್ಕಾಗಿ 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಕ್ಕುಪತ್ರ ವಂಚಿತ ಕುಟುಂಬಗಳಿಗೆ ಸಮಸ್ಯೆ ಆಗದಂತೆ ವ್ಯವಸ್ಥೆ ಕಲ್ಪಿಸಲು ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಅರಣ್ಯ ಭೂಮಿ ಹೊರತಾದ ಜಾಗಕ್ಕೆ ತ್ವರಿತವಾಗಿ ಎನ್‌ಒಸಿ ನೀಡಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದ್ದರು.
ಬಗೆಹರಿಯದ ಸಮಸ್ಯೆ
ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಆರಂಭದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಮೀಕ್ಷೆಗೆ ಇಳಿದಿತ್ತು. ಆದರೆ ಈ ಸರ್ವೇ ಮೂಲಕ ಕೆಲವರ ಸಮಸ್ಯೆಗೆ ಪರಿಹಾರ ಕಂಡುಕೊಂಡದ್ದು ಬಿಟ್ಟರೆ, ಬಹುತೇಕ ಮಂದಿಯ ಸಮಸ್ಯೆ ಹಾಗೆಯೇ ಇದೆ. ಅರಣ್ಯ ಇಲಾಖೆ ಜಂಟಿ ಸಮೀಕ್ಷೆಗೆ ನಿರಾಸಕ್ತಿ ತೋರಿಸುತ್ತಿರುವ ಕಾರಣ ಹಕ್ಕುಪತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಾಗುತ್ತಿಲ್ಲ ಎಂದು ಫಲಾನುಭವಿಗಳು ದೂರಿದ್ದಾರೆ. ಕೆಲವು ಕಡೆಗಳಲ್ಲಿ ಕಂದಾಯ ಭೂಮಿ ಹಾಗು ಅರಣ್ಯ ಭೂಮಿ ಒಂದೇ ಸರ್ವೆ ನಂಬರ್ ಅಡಿ ಬರುತ್ತದೆ. ಇಂತಹ ಭೂಮಿಯನ್ನು ಅರಣ್ಯ ಇಲಾಖೆ ನಮ್ಮ ವ್ಯಾಪ್ತಿಯದು ಎಂದು ವಾದಿಸುತ್ತಿದೆ. ಈ ಸಮಸ್ಯೆ ಹೋಗಲಾಡಿಸಲು ಸರ್ಕಾರ ಜಂಟಿ ಸಮೀಕ್ಷೆಗೆ ಆದೇಶ ನೀಡಿತ್ತು. ಆದರೆ ಅರಣ್ಯ ಇಲಾಖೆ ಕಂದಾಯ ಇಲಾಖೆಯೊಂದಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ದಶಕದಿಂದ ಅರಣ್ಯದಂಚಿನಲ್ಲಿ ವಾಸವಿರುವ ಬಡವರಿಗೆ 94ಸಿ ಅಡಿ ಹಕ್ಕುಪತ್ರ ಪಡೆಯಲು ಅರಣ್ಯ ಇಲಾಖೆಯಿಂದ ತೊಂದರೆ ಆಗುತ್ತಿದ್ದರೆ ಶೀಘ್ರ ಸರಿಪಡಿಸಲಾಗುವುದು. ಕಂದಾಯ ಇಲಾಖೆ ಜತೆಗಿನ ಸಮೀಕ್ಷೆಗೆ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.
- ಆನಂದ್ ಸಿಂಗ್, ಅರಣ್ಯ ಸಚಿವ
ಬಡವರಿಗೆ ಹಕ್ಕುಪತ್ರ ನೀಡಲು ಅರಣ್ಯ ಇಲಾಖೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಜಂಟಿ ಸಮೀಕ್ಷೆ ನಡೆಸಿ ತಮ್ಮ ವ್ಯಾಪ್ತಿಯಲ್ಲದ ಭೂಮಿಗೆ ಎನ್‌ಒಸಿ ನೀಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅರಣ್ಯ ಇಲಾಖೆ ಜಂಟಿ ಸರ್ವೇಗೆ ಮುಂದಾಗುತ್ತಿಲ್ಲ. ಹಲವು ಕಾರಣಗಳನ್ನು ಹೇಳಿ ಬಡವರಿಗೆ ಅನ್ಯಾಯ ಮಾಡುತ್ತಿದೆ. ಕಂದಾಯ ಇಲಾಖೆಯೂ ಅವರ ಮೇಲೆ ಒತ್ತಡ ತರುತ್ತಿಲ್ಲ. ರಾಜ್ಯಾದ್ಯಂತ ಈ ಸಮಸ್ಯೆ ಎದುರಾಗಿದ್ದು, ಸಾವಿರಾರು ಅರ್ಜಿಗಳು ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಕೊಳೆಯುತ್ತಿವೆ.
-ತುಂಗಪ್ಪ ಬಂಗೇರ, ಜಿಪಂ ಸದಸ್ಯ, ದ.ಕ.