

ಮಂಡ್ಯ: ಬರೋಬರಿ 75 ವರ್ಷದಿಂದ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದ ನಗರದ ಹಾಲಹಳ್ಳಿ ನ್ಯೂ ತಮಿಳು ಕಾಲನಿಯ ನಿವಾಸಿಗಳ ಬೇಡಿಕೆ ಕೊನೆಗೂ ಈಡೇರಿದೆ. ಸೋಮವಾರ ರಾತ್ರಿ ಆಯೋಜಿಸಿದ್ದ ಸಮಾರಂಭದಲ್ಲಿ 168 ಫಲಾನುಭವಿಗಳಿಗೆ ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹಕ್ಕುಪತ್ರ ವಿತರಿಸಿದರು.
ಸ್ವಂತ ಸೂರಿನ ಕನಸಿನೊಂದಿಗೆ ಹಲವು ದಶಕದಿಂದ ನಿವಾಸಿಗಳು ಹೋರಾಟ ಮಾಡುತ್ತಿದ್ದರು. ಆದರೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ರವಿಕುಮಾರ್ ಗಣಿಗ ಮುತುವರ್ಜಿ ವಹಿಸಿ ಅರ್ಹರಿಗೆ ಸೌಲಭ್ಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಕ್ಕುಪತ್ರ ಪಡೆದ ಫಲಾನುಭವಿಗಳ ಸಂತಸ ಮುಗಿಲುಮುಟ್ಟಿತ್ತು.
ರವಿಕುಮಾರ್ ಗಣಿಗ ಮಾತನಾಡಿ, ಏಳು ತಿಂಗಳ ಹಿಂದೆ ಕಾಲನಿಗೆ ಬಂದಾಗ ಹಕ್ಕುಪತ್ರದ ಬಗ್ಗೆ ಮನವಿ ಮಾಡಿಕೊಂಡಿದ್ದರು. ಅದರಂತೆ ಸರ್ಕಾರದೊಂದಿಗೆ ಚರ್ಚಿಸಿ ಸೌಲಭ್ಯ ಒದಗಿಸಿಕೊಡಲಾಗಿದೆ. ಇನ್ನು ಮುಂದೆ ಯಾವುದೇ ಆತಂಕ ಪಡುವುದು ಬೇಡ. ಯಾರೋ ಬಂದು ಮನೆ ಖಾಲಿ ಮಾಡಿಸಬಹುದೆನ್ನುವ ಭಯವಿಲ್ಲ. ನೆಮ್ಮದಿಯಿಂದ ಬದುಕು ನಡೆಸಿ. ಇದೊಂದು ಪುಣ್ಯದ ಪತ್ರ ಎಂದರು.
ದಿನೇಶ್ ಗೂಳಿಗೌಡ ಮಾತನಾಡಿ, ಮಂಡ್ಯ ಕ್ಷೇತ್ರಕ್ಕೆ ರವಿಕುಮಾರ್ ಗಣಿಗ ಹೆಚ್ಚೆಚ್ಚು ಅನುದಾನ ತರುತ್ತಿದ್ದಾರೆ. ಇದರಿಂದಾಗಿ ಅಭಿವೃದ್ಧಿಯ ಚಿತ್ರಣ ಬದಲಾಗುತ್ತಿದೆ. ಐದು ಸಾವಿರ ಮನೆ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದು, ಸರ್ಕಾರದಿಂದಲೂ ಸ್ಪಂದನೆ ಸಿಕ್ಕಿದೆ ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಸಾಮಾಜಿಕ ಹೋರಾಟಗಾರ ನಾಗೇಶ್ ಇತರರಿದ್ದರು.