

ಮಡಿಕೇರಿ: ಆದಿಮಸಂಜಾತ ಕೊಡವರನ್ನು ಒಳಗೊಂಡ ಪರಿಪೂರ್ಣ ಮತ್ತು ಅರ್ಥಪೂರ್ಣ ಗಣರಾಜ್ಯಕ್ಕಾಗಿ ಒತ್ತಾಯಿಸಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯವನ್ನು ೭೬ನೇ ಗಣರಾಜ್ಯೋತ್ಸವದ ದಿನವಾದ ಭಾನುವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತವಾಗಿ ಮಂಡಿಸಿತು.
ಸೂಕ್ಷ್ಮಾತಿಸೂಕ್ಷ್ಮ ನಗಣ್ಯ ಸಂಖ್ಯೆಯ ಕೊಡವರ ಗೌರವಾನ್ವಿತ ಗುರಿಗಳು ಮತ್ತು ಶಾಸನ ಬದ್ಧ ಹಕ್ಕೊತ್ತಾಯಗಳ ಅನುಷ್ಠಾನಕ್ಕಾಗಿ ಜಿಲ್ಲಾಡಳಿತ ಮೂಲಕ ಸರಕಾರಗಳಿಗೆ ಮನವಿ ಸಲ್ಲಿಸುತ್ತಿರುವುದಾಗಿ ಇದೇ ಸಂದರ್ಭ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
ದೇಶದ ಸಂವಿಧಾನದ ಆರ್ಟಿಕಲ್ ೨೪೪ ಆರ್/ಡಬ್ಲ್ಯೂ ೬ನೇ ಮತ್ತು ೮ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಘೋಷಣೆ ಪ್ರಕಾರ ಅಂತರಾಷ್ಟ್ರೀಯ ಕಾನೂನಿನನ್ವಯ ಆದಿಮಸಂಜಾತ ಕೊಡವರಿಗೆ ಮಾನ್ಯತೆ ಮತ್ತು ಸೂಕ್ಷ್ಮಾತಿ ಸೂಕ್ಷ್ಮ ಕೊಡವ ಬುಡಕಟ್ಟು ಕುಲಕ್ಕೆ ಎಸ್‌ಟಿ ಟ್ಯಾಗ್ ಪರಿಗಣಿತೆಯೊಂದಿಗೆ ಸಿಎನ್‌ಸಿ ಪ್ರತಿಪಾದಿಸಿರುವ ಕೊಡವರ ಭೂಮಿ, ಭಾಷೆ, ಸಂಸ್ಕೃತಿ, ಜನಪದ ಇತ್ಯಾದಿ ಅಶೋತ್ತರಗಳಿಗೆ ರಾಜ್ಯಾಂಗ ಖಾತರಿಯ ಕಾನೂನುಬದ್ಧ ಹಕ್ಕುಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಸಂವಿಧಾನದ ವಿಧಿ ೩೨ರ ಅಡಿಯಲ್ಲಿ ಜನರ ಆಶೋತ್ತರಗಳಿಗೆ ಪರಿಹಾರ ಕಂಡುಕೊಳ್ಳುವುದು ೬ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು, ಅದರಂತೆ ಸಾಂವಿಧಾನಿಕ ಕಾರ್ಯವಿಧಾನದ ಮೂಲಕ ಕೊಡವರ ಪರಮೋಚ್ಚ ಆಕಾಂಕ್ಷೆಗಳು ಮತ್ತು ಗೌರವಾನ್ವಿತ ಗುರಿಗಳನ್ನು ಸಾಧಿಸಲು ಈ ಶಾಂತಿಯುತ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಶಾಂತಿಯುತ ಕಾರ್ಯಕ್ರಮದಲ್ಲಿ ಪುಲ್ಲೇರ ಸ್ವಾತಿ, ಪುಲ್ಲೇರ ಕಾಳಪ್ಪ, ಬಾಚಿನಾಡಂಡ ಗಿರೀಶ್, ಪಟ್ಟಮಾಡ ಲಲಿತಾ, ಕರ್ನಲ್ ಬಿ.ಎಂ.ಪಾರ್ವತಿ, ಬೊಟ್ಟಂಗಡ ಸವಿತಾ, ಅರೆಯಡ ಸವಿತಾ, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್, ಆಳಮಂಡ ಜೈ ಗಣಪತಿ, ಕಾಂಡೇರ ಸುರೇಶ್ ಇತರರು ಪಾಲ್ಗೊಂಡಿದ್ದರು.