

ಮಂಗಳೂರು: ಕಂಬಳದಲ್ಲೀಗ ದಾಖಲೆಯ ಹುರುಪು. ಪ್ರತಿ ಕಂಬಳದಲ್ಲೂ ಒಂದಲ್ಲ ಒಂದು ರೆಕಾರ್ಡ್ ಆಗುತ್ತಿದ್ದು, ಈಗ ಈ ಋತುವಿನ ಕೊನೆಯದಾಗಿರುವ ಬಂಗಾಡಿ ಕೊಲ್ಲಿ 23ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಹಕ್ಕೇರಿ ಸುರೇಶ್ ಶೆಟ್ಟಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ನೇಗಿಲು ಹಿರಿಯ ವಿಭಾಗದ ಚಾನ್ಸ್ ಓಟದಲ್ಲಿ ಅವರು 124 ಮೀಟರ್ ಉದ್ದದ ಕರೆಯನ್ನು 11.64 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದಾರೆ. ಇದನ್ನು 100 ಮೀಟರ್‌ಗೆ ಬದಲಾಯಿಸಿದರೆ 9.38 ಸೆಕೆಂಡ್ ಎಂದಾಗುತ್ತದೆ. ಇದು ಇದುವರೆಗಿನ ಅತಿ ವೇಗದ ಓಟ ಎಂಬುದು ದಾಖಲಾಗಿದೆ. ಬೋಳದಗುತ್ತು ಸತೀಶ್ ಶೆಟ್ಟಿ ಅವರ ಕೋಣಗಳನ್ನು ಓಡಿಸಿ ಈ ದಾಖಲೆ ನಿರ್ಮಿಸಿದ್ದಾರೆ ಸುರೇಶ್ ಶೆಟ್ಟಿ.
ಅದೇ ರೀತಿ ಇರ್ವತ್ತೂರು ಆನಂದ್ ಶೆಟ್ಟಿ ಕೂಡ ದಾಖಲೆ ನಿರ್ಮಿಸಿದ್ದಾರೆ. ಅವರು ಕೊಳಚ್ಚೂರು ಕೊಂಡ್ಯೊಟ್ಟು ಸುಕುಮಾರ ಶೆಟ್ಟಿ ಅವರ ಕೋಣಗಳನ್ನು ಹಗ್ಗ ಹಿರಿಯ ವಿಭಾಗದ ಚಾನ್ಸ್‌ನಲ್ಲಿ 11.84 ಸೆಕೆಂಡ್‌ಗಳಲ್ಲಿ ಓಡಿಸಿದ್ದಾರೆ. ಇದು 100 ಮೀ.ಗೆ ಆಗುವಾಗ 9.54 ಎಂದಾಗುತ್ತದೆ.
ಅಶ್ವತ್ಥಪುರ ಶ್ರೀನಿವಾಸ ಗೌಡ 9.55 ಸೆಕೆಂಡ್‌ಗಳಲ್ಲಿ 100 ಮೀಟರ್ ಓಡಿರುವುದು ವಿಶ್ವದ ಗಮನ ಸೆಳೆದಿತ್ತು. ಇದನ್ನು 9.52 ಸೆಕೆಂಡ್‌ಗಳಲ್ಲಿ ಓಡುವ ಮೂಲಕ ಬಜಗೋಳಿ ನಿಶಾಂತ್ ಶೆಟ್ಟಿ ಮೀರಿಸಿ ಹೊಸ ದಾಖಲೆ ನಿರ್ಮಿಸಿದ್ದರು.