ಹೈನೋದ್ಯಮದಿಂದ ಆರ್ಥಿಕ ಪ್ರಗತಿ, ಬಮುಲ್ ನಿರ್ದೇಶಕ ಭಾಸ್ಕರ್, ಹೆಚ್ಚು ಹಾಲು ನೀಡಿದ ರಾಸು ಮಾಲೀಕರಿಗೆ ಬಹುಮಾನ

09 Nela Ph 01Milk Compitation
Published on

ನೆಲಮಂಗಲ: ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿರುವ ಪಶುಸಂಗೋಪನೆಯಿಂದ ಗ್ರಾಮೀಣಭಾಗದ ಕೃಷಿಕರ ಕುಟುಂಬದ ಆರ್ಥಿಕಮಟ್ಟ ಸುಧಾರಣೆಯಾಗಿದೆ ಎಂದು ತಾಲೂಕು ಬಮುಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ತಿಳಿಸಿದರು.

ಪಟ್ಟಣದ ಸೊಂಡೇಕೊಪ್ಪ ರಸ್ತೆಯ ಶ್ರೀಬಯಲು ಉದ್ಬವಗಣಪತಿ ದೇವಸ್ಥಾನದ ಆವರಣದಲ್ಲಿ ತಾಲೂಕು ಪಶುಪಾಲಕರ ಸಂಘ ಮತು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ 9ನೇ ವರ್ಷದ ಅಧಿಕ ಹಾಲು ಕರೆಯುವ ರಾಸುಗಳ ಸ್ಪರ್ಧೆಯ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೌಕರರಿಗಿಂತ ಹೈನೋದ್ಯಮಿಗಳು ಹೆಚ್ಚು ನೆಮ್ಮದಿಯಿಂದ ಜೀವನ ಸಾಗಿಸುತ್ತಾರೆ, ಅನಕ್ಷರಸ್ಥರು ಆರ್ಥಿಕವಾಗಿ ಸಬಲರಾಗಬಹುದು. ಹಾಲು ಉತ್ಪಾದಕರ ಕ್ಷೇತ್ರಕ್ಕೆ ಸರ್ಕಾರಗಳು ಸಾವಿರಾರು ಕೋಟಿ ಅನುದಾನ ಮೀಸಲಿಡುತ್ತಿವೆ. ವಿಶೇಷ ಕಾರ್ಯಕ್ರಮ ಜಾರಿಗೆ ತಂದಿದ್ದು, ಪಶುಪಾಲಕರಿಗೆ ಸಾಕಷ್ಟು ಅನುಕೂಲಗಳಾಗುತ್ತಿವೆ. ಅಧಿಕ ಹಾಲು ಕರೆಯುವ ಸ್ಪರ್ಧೆ ಹೈನುಗಾರಿಕೆ ಉತ್ತೇಜನಕ್ಕೆ ಸಹಕಾರಿಯಾಗಲಿವೆ ಎಂದರು.

ಬೆಂಗಳೂರು ಉತ್ತರ ತಾಲೂಕಿನ ಬಮುಲ್ ನಿರ್ದೇಶಕ ಕೇಶವ್‌ಮೂರ್ತಿ ಮಾತನಾಡಿ, ಹೈನೋದ್ಯಮ ಕಷ್ಟದ ಕೆಲಸವಾದರೂ ಒಳ್ಳೆಯ ಉದ್ಯಮವಾಗಿದೆ. ದೇಶೀಯ ಸಂಸ್ಕೃತಿಯ ಪ್ರತೀಕವಾಗಿರುವ ಗೋಮಾತೆಯ ರಕ್ಷಣೆ ಮತ್ತು ಪೋಷಣೆ ಮಾಡಬೇಕು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಡಾ.ಮಂಜುನಾಥ್ ಮಾತನಾಡಿ, ಹೈನುಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಪುರಸಭೆ ಮಾಜಿ ಅಧ್ಯಕ್ಷ ದಿವಂಗತ ನೆ.ಲ.ಗಿರಿಧರ್ ಹಾಗೂ ಹೈನೋದ್ಯಮಿ ಗೊವೇನಹಳ್ಳಿಶಿವಣ್ಣ ಅವರ ಸವಿನೆನಪಿಗಾಗಿ ಆಯೋಜಿಸಿಸಲಾಗಿದೆ ಎಂದು ತಿಳಿಸಿದರು.

ವಿಜೇತರು: ಬೆಂಗಳೂರು ಉತ್ತರ ತಾಲೂಕಿನ ರಾವುತ್ತನಹಳ್ಳಿಯ ಜೀವಗಾನ ಡೇರಿ ಾರಂ ರಾಸು 44.300 ಕೆಜಿ ಹಾಲು ಕರೆದು (ಪ್ರಥಮ) 80 ಸಾವಿರ ನಗದು, ಪಾರಿತೋಷಕ ಪಡೆದುಕೊಂಡಿತು. ಬೆಂಗಳೂರಿನ ಕೌಸಿಕ್ ಡೇರಿ ರಾಸು 40.280 ಕೆಜಿ (ದ್ವಿತೀಯ) 60 ಸಾವಿರ ನಗದು, ತಾಲೂಕಿನ ಗೊವೇನಹಳ್ಳಿ ಲಕ್ಷ್ಮೀ ಡೇರಿ ಫಾರಂನ ಸುನಂದಾ ಶಿವಕುಮಾರ್ ಅವರ ರಾಸು 39.940 ಕೆಜಿ (ತೃತೀಯ) 40 ಸಾವಿರ ನಗದು ಪಾರಿತೋಷಕ ಪಡೆದುಕೊಂಡಿತು. ಮಲ್ಲಿಗೆ ತೋಟ ಗೀತಾ ಯತೀಶ್ ಅವರ ಹಸು 36.860 ಕೆಜಿ (4 ನೇ ಸ್ಥಾನ) 20 ಸಾವಿರ ನಗದು, ಕೌಸಿಕ್ ಡೇರಿ ರಾಸು 31.920 ಕೆ.ಜಿ. (5ನೇ ಸ್ಥಾನ) 10 ಸಾವಿರ ನಗದು ಪಾರಿತೋಷಕ ಪಡೆಯಿತು.

ಕರುಗಳ ಪ್ರದರ್ಶನ ಸ್ಪರ್ಧೆ: 6 ತಿಂಗಳ ಒಳಗಿನ ಕರುಗಳ ಪ್ರದರ್ಶನ ಸ್ಪರ್ಧೆಯಲ್ಲಿ ಭಕ್ತನಪಾಳ್ಯ ಮುನಿರಾಜು (ಪ್ರಥಮ) 3 ಸಾವಿರ ನಗದು ಜತೆಗೆ ಪಾರಿತೋಷಕ ಪಡೆದುಕೊಂಡರೆ, ರಮೇಶ್ (ದ್ವಿತೀಯ) 2 ಸಾವಿರ ನಗದು ಜತೆಗೆ ಪಾರಿತೋಷಕ ಪಡೆದುಕೊಂಡಿತು.

ಹೊನ್ನಗಂಗಯ್ಯಪಾಳ್ಯ ಮುನಿರಾಜು (ತೃತೀಯ) 1 ಸಾವಿರ ನಗದು, ಪಾರಿತೋಷಕ ಪಡೆದುಕೊಂಡರು. ನಂತರ 6 ತಿಂಗಳ ಮೇಲ್ಪಟ್ಟ ಕರುಗಳ ಪ್ರದರ್ಶನದಲ್ಲಿ ಹೊನ್ನಗಂಗಯ್ಯಪಾಳ್ಯ ಜಗದೀಶ್ (ಪ್ರಥಮ) 5ಸಾವಿರ ನಗದು ಜತೆಗೆ ಪಾರಿತೋಷಕ , ಅಂಜಿನಪ್ಪ (ದ್ವಿತೀಯ) 3 ಸಾವಿರ ನಗದು ಜತೆಗೆ ಪಾರಿತೋಷಕ, ವಸಂತ್‌ಕುಮಾರ್(ತೃತೀಯ) 1 ಸಾವಿರ ನಗದು ಜತೆಗೆ ಪಾರಿತೋಷಕ ಪಡೆದರು.

ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ, ಬಮುಲ್ ತಾಲೂಕು ಉಪವ್ಯವಸ್ಥಾಪಕ ಎ.ಆರ್.ಗೋಪಾಲ್‌ಗೌಡ್ರು, ಪಶುವೈದ್ಯ ಡಾ.ಮನು, ತಾಲೂಕು ಪಶುಪಾಲಕರ ಸಂಘದ ಗೌರವಾಧ್ಯಕ್ಷ ಎನ್.ಗಂಗರಾಜು, ಉಪಾಧ್ಯಕ್ಷ ಜಗದೀಶ್, ಖಜಾಂಚಿ ರಾಜಗೋಪಾಲ್, ಪ್ರಧಾನ ಕಾರ್ಯದರ್ಶಿ ಸದಾಶಿವಯ್ಯ, ನರಸಿಂಹಮೂರ್ತಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗುರುಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net