

ಬೆಂಗಳೂರು: ವಾಡಿಕೆಗಿಂತ ಹೆಚ್ಚು ತಾಪಮಾನದಿಂದ ಕಾದ ಕೆಂಡದಂತಾದ ಕರುನಾಡಿನ ಕೆಲ ಪ್ರದೇಶಗಳಲ್ಲಿ ಶುಕ್ರವಾರ ವರುಣ ತಂಪೆರೆದಿದೆ.ಮಳೆಯ ನಡುವೆಯೂ ರಾಜ್ಯದ ಬಹತೇಕ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಮುಂದುವರಿದಿದೆ. ರಾಯಚೂರಿನ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ಬಿಎಂಟಿಸಿ ನೌಕರ ಮಲ್ಲಯ್ಯಸ್ವಾಮಿ (48) ಎಂಬುವರು ಬಿಸಿಲಿನ ಶಾಖಕ್ಕೆ ಮೃತಪಟ್ಟಿದ್ದಾರೆ.
ಮೈಸೂರಿನ ಹುಣಸೂರು, ಎಚ್.ಡಿ.ಕೋಟೆ, ಜಯಪುರ, ಮಂಡ್ಯದ ಮಳವಳ್ಳಿ, ಶಿವಪುರ, ಬೆಂ. ಗ್ರಾಮಾಂತರದ ಹೊಸಕೋಟೆ, ಕೊಡಗು, ಹಾಸನ, ಬೆಂಗಳೂರು ಸೇರಿ ವಿವಿಧ ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ಬಿದ್ದಿದೆ. ಮೈಸೂರು ನಗರದಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚು ಮಳೆ ಸುರಿಯಿತು. ದಪ್ಪ ಗಾತ್ರದ ಆಲಿಕಲ್ಲು ರಸ್ತೆ ಮೇಲೆ ಬಿದ್ದವು. ಜೋರು ಗಾಳಿಗೆ ವಿದ್ಯುತ್ ಕಂಬಗಳು, 100ಕ್ಕೂ ಹೆಚ್ಚು ಮರಗಳು ಉರುಳಿಬಿದ್ದವು.ಕೆಲವೆಡೆ ಮರ ಬಿದ್ದ ಪರಿಣಾಮ ಶಾಲಾ ವಾಹನ, ಕಾರು, ಆಟೋ ಸೇರಿ ಇತರೆ ವಾಹನಗಳು ಜಖಂಗೊಂಡವು. ಚಾ.ನಗರ ಜಿಲ್ಲೆಯ ಗುಂಡ್ಲುಪೇಟೆ ಸೇರಿ ವಿವಿಧೆಡೆ ಜೋರು ಮಳೆಯಾಯಿತು. ಹನೂರು ತಾಲೂಕಿನ ವಿವಿಧಡೆ ಶುಕ್ರವಾರ ಸುರಿದ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಸಿಡಿಲಿಗೆ ಶಾಗ್ಯ ಗ್ರಾಮದಲ್ಲಿ ಮೂರು ಎಮ್ಮೆ, ಹಸು ಬಲಿಯಾಗಿವೆ. ಕೆಲವೆಡೆ ಬಾಳೆ ಬೆಳೆಗೆ ಹಾನಿಯಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಬಿರುಗಾಳಿ ಸಹಿತ ಮಳೆಗೆ 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಕೊಡಗಿನ ಕಾವೇರಿ ನದಿ ಪಾತ್ರದಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ನದಿಗೆ ಜೀವಕಳೆ ಬಂದಿದೆ. ಹಲವು ದಶಕಗಳ ನಂತರ ಕಾವೇರಿ ನದಿ ಸಂಪೂರ್ಣ ಬತ್ತಿ ಹೋಗಿ ಬಂಡೆಗಳೆಲ್ಲ ಕಾಣಿಸುತ್ತಿತ್ತು. ಈಗ ನದಿಯಲ್ಲಿ ಮತ್ತೆ ಸಣ್ಣ ಪ್ರಮಾಣದಲ್ಲಿ ನೀರಿನ ಹರಿವು ಕಾಣಿಸಿಕೊಂಡಿದೆ. ದುಬಾರೆ ಬಳಿ ಶುಕ್ರವಾರ ನದಿಯಲ್ಲಿ ಹರಿವು ಶುರುವಾಗಿ ಶುಭ ಸೂಚನೆ ಸಿಕ್ಕಂತಾಗಿದೆ. ಕೆಲವೆಡೆ ಮೋಡ ಕವಿದ ವಾತಾವರಣ ಇದ್ದರೂ ಮಳೆ ಸುರಿಯಲಿಲ್ಲ. ಗಾಳಿ, ಗುಡುಗು, ಮಿಂಚಿನ ಆರ್ಭಟ ಜೋರಾಗಿತ್ತು. ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣದ ಜತೆಗೆ ಮಿಂಚು ಗುಡುಗು ಕಾಣಿಸಿಕೊಂಡಿತ್ತು.
8ರಿಂದ ಕೆಲವೆಡೆ ಬಿರುಸು
ಬೆಂಗಳೂರು, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮೇ 8ರಿಂದ ಮೇ 10ರವರೆಗೆ ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಉಡುಪಿ,ದಕ್ಷಿಣ, ಉತ್ತರ ಕನ್ನಡದಲ್ಲಿ ಮೇ 9ರಿಂದ ಮುಂದಿನ ಎರಡು ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.
28 ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆ
ದಕ್ಷಿಣ ಭಾಗದ ಕೆಲವೆಡೆ ಮಳೆ ಸುರಿದರೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಒಣಹವೆ ಮುಂದುವರಿದಿದೆ. ಶುಕ್ರವಾರ ರಾಯಚೂರಿನಲ್ಲಿ 46.4 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಕಲಬುರಗಿ 45.8, ಯಾದಗಿರಿ 44.9, ಬಳ್ಳಾರಿ 44.8, ವಿಜಯಪುರ 44.7, ಕೊಪ್ಪಳ 43.9, ಗದಗ 43.4, ಬಾಗಲಕೋಟೆ 43.5, ಬೆಳಗಾವಿ 43.1, ಬೀದರ್ 43, ಮಂಡ್ಯ 43, ರಾಮನಗರ 42.6, ಧಾರವಾಡ 42.2, ಚಿತ್ರದುರ್ಗ 42, ಕೋಲಾರ 42, ಹಾವೇರಿ 41.9, ತುಮಕೂರು 41.8, ದಾವಣಗೆರೆ 41.3, ಚಿಕ್ಕಬಳ್ಳಾಪುರ 41.9, ಬೆಂ.ಗ್ರಾಮಾಂತರ 41.3, ಶಿವಮೊಗ್ಗ 40.1, ಬೆಂಗಳೂರು 40.9 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಈ ಮೇಲಿನ ಜಿಲ್ಲೆಗಳಲ್ಲಿ ಮುಂದಿನ 4 ದಿನ ಉಷ್ಣ ಅಲೆ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಮಳೆ ಸುರಿದರೂ ಕೆಲ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗಿದೆ.
3ನೇ ದಿನವೂ 40ರ ಗಡಿ ದಾಟಿದ ಉಷ್ಣಾಂಶ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸತತ 3ನೇ ದಿನವೂ ಉಷ್ಣಾಂಶ 40ರ ಗಡಿ ದಾಟಿದೆ. ಮೇ 1ರಂದು 41.3, ಮೇ 2ರಂದು 41.1, ಮೇ 3ರಂದು 40.9 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಸತತ ಎರಡು ದಿನವೂ ನಗರದ ಕೆಲವೆಡೆ ಮಳೆ ಬಿದ್ದರೂ ಬಿಸಿಲಿನ ಪ್ರಖರತೆ ಹೆಚ್ಚಿದೆ. ವಾಡಿಕೆಯಂತೆ 34 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು. ಆದರೆ, ವಾಡಿಕೆಗಿಂತ 6.6 ಡಿ.ಸೆ.ಹೆಚ್ಚು ತಾಪಮಾನ ದಾಖಲಾಗಿದೆ.