

ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ಹಲವೆಡೆ ಶುಕ್ರವಾರ ರಾತ್ರಿ ಭಾರಿ ಬಿರುಗಾಳಿ ಸಮೇತ ಆಲಿಕಲ್ಲು ಮಳೆ ಸುರಿಯಿತು. ಹಲವು ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿತು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಭಾಗದಲ್ಲಿ 5, ಹುಡ್ಕೋ ಕಾಲನಿಯಲ್ಲಿ 2, ಕಲಕೇರಿಯಲ್ಲಿ 2, ಬಿಡನಾಳ ಹೊರವಲಯದಲ್ಲಿ 3, ಪಟ್ಟಣದ ಹೊರವಲಯದಲ್ಲಿ 4, ಹಾರೋಗೇರಿ, ಬಸಾಪುರದಲ್ಲಿ 5 ವಿದ್ಯುತ್ ಕಂಬಗಳು ಧರೆಗುರುಳಿವೆ.
ಭಾರಿ ಬಿರುಗಾಳಿಗೆ ಮರಗಳು ಮತ್ತು ಮರಗಳ ಕೊಂಬೆಗಳು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಲೈನ್ ಸರಿಪಡಿಸುವ ಕಾರ್ಯ ನಡೆಸಿದ್ದು, ಶನಿವಾರವೂ ಕಾರ್ಯ ಮುಂದುವರಿದಿದೆ. ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.
ಗಾಳಿ ಮಳೆಗೆ ಬಾಗೇವಾಡಿ ಭಾಗದ ಹೊಲದಲ್ಲಿನ ಮನೆಯೊಂದರ ಮೇಲ್ಛಾವಣಿಗೆ ಅಳವಡಿಸಿದ್ದ ತಗಡುಗಳು ಹಾರಿಹೋಗಿವೆ. ಹಳ್ಳಿಗುಡಿಯಲ್ಲಿ ಮನೆಯೊಂದರ ಛಾವಣಿ ಕುಸಿದು ಸಾಮಗ್ರಿಗಳು ಹಾನಿಗೊಂಡಿವೆ. ಪಟ್ಟಣದ ಕೆಲ ಅಂಗಡಿಗಳ ಮುಂದಿನ ತಗಡು ಹಾರಿಹೋಗಿವೆ.
ಹೀಗೆ... ಕೆಲವು ಭಾಗದಲ್ಲಿ ಜನಜೀವನವು ಅಸ್ತವ್ಯಸ್ತಗೊಂಡಿತು. ಮುರುಡಿ, ಮುರುಡಿತಾಂಡಾ, ಕೆಲೂರು ಮತ್ತಿತರ ಕಡೆಗಳಲ್ಲಿ ಮಾವು, ಬಾಳೆ ಬೆಳೆ ಹಾನಿಗೊಂಡಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ.
ಗಾಳಿ-ಮಳೆಯಿಂದ ಹಲವೆಡೆ ಮರಗಳು ಹಾಗೂ ಮರದ ಕೊಂಬೆಗಳು ವಿದ್ಯುತ್ ಲೈನ್ ಮೇಲೆ ಬಿದ್ದು ಕಂಬಗಳು ನೆಲಕ್ಕುರುಳಿವೆ. ಕೆಲವೆಡೆ ವಿದ್ಯುತ್ ಲೈನ್ ಸರಿಪಡಿಸಿದ್ದೇವೆ. ಇನ್ನೂ ಹಲವೆಡೆ ಸರಿಪಡಿಸುವ ಕೆಲಸ ನಡೆದಿದೆ. | ಚನ್ನಪ್ಪ ಲಮಾಣಿ ಹೆಸ್ಕಾಂ ಶಾಖಾಧಿಕಾರಿ ಮುಂಡರಗಿ