ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಬೇಡಿಕೆಗೆ ಹೆಚ್ಚಿದ ಬಲ; ಸಮಿತಿ ಸದಸ್ಯರಿಂದ ಸ್ಪೀಕರ್, ಕುಲಪತಿ ಸಹಿತ ಸಂಘ ಸಂಸ್ಥೆ ಮುಖಂಡರ ಭೇಟಿ

IMG-20241004-WA0010
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇಕು ಎಂದು ಜನಾಭಿಪ್ರಾಯ ಮೂಡಿಸುವ ಉದ್ದೇಶದಿಂದ ಹೋರಾಟ ಸಮಿತಿ ಸಂಚಾಲಕ ಐವನ್ ಡಿಸೋಜ ನೇತೃತ್ವದಲ್ಲಿ ನಾಡಿನ ಗಣ್ಯರು, ಜನಪ್ರತಿನಿಧಿಗಳು, ವಿವಿಧ ವರ್ಗದ ಜನರು, ಸಂಘಸಂಸ್ಥೆಗಳ ಮುಖಂಡರನ್ನು ಭೇಟಿಯಾಗುವ ಕೆಲಸ ಶುಕ್ರವಾರ ನಗರದಲ್ಲಿ ಮುಂದುವರಿದಿದೆ.ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಅವರನ್ನು ಹೋರಾಟ ಸಮಿತಿ ನಿಯೋಗ ಭೇಟಿ ಮಾಡಿ ಸಮಾಲೋಚನೆ ನಡೆಸಿತು.ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರನ್ನು ಭೇಟಿ ಮಾಡಿದ ನಿಯೋಗ ಸಂತ ಅಲೋಶಿಯಸ್ ಕಾಲೇಜು, ಬೆಸೆಂಟ್ ಮಹಿಳಾ ಕಾಲೇಜುಗಳಲ್ಲಿ ಸಮಾಲೋಚನೆ ಸಭೆ ನಡೆಸಿದರು.ಐವನ್ ಡಿಸೋಜ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ನಿಕಟಪೂರ್ವ ಅಧ್ಯಕ್ಷ ಪೃಥ್ವಿರಾಜ್ ರೈ, ಕಾರ್ಯದರ್ಶಿ ಶ್ರೀಧರ ಎಚ್., ಕೋಶಾಧಿಕಾರಿ ಗಿರೀಶ್ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ, ಜತೆ ಕಾರ್ಯದರ್ಶಿ ಜ್ಯೋತಿ, ಹಿರಿಯ ವಕೀಲರಾದ ಎಂ.ಪಿ.ನೊರೊನ್ಹಾ, ದಿವಾಕರ ವಿ. ನಿಯೋಗದಲ್ಲಿದ್ದರು.ಬಳಿಕ ‘ವಿಜಯವಾಣಿ’ ಜತೆ ಮಾತನಾಡಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ಹೈಕೋರ್ಟ್ ಪೀಠ ಸ್ಥಾಪನೆ ಅಭಿಯಾನ ಸಂಬಂಧಿಸಿ ಮಂಗಳೂರು ವಕೀಲರ ಸಂಘದ ಸದಸ್ಯರು ಆಗಿರುವ ಸ್ಪೀಕರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಇದು ಮುಖ್ಯ. ಎಲ್ಲರೂ ಜತೆ ಸೇರಿ ಮಾಡೋಣ ಎನ್ನುವ ಭರವಸೆ ನೀಡಿದ್ದಾರೆ. ಅ.17ರಂದು ಕಾನೂನು ಹಾಗೂ ಸಂಸದೀಯ ಖಾತೆಗಳ ವ್ಯವಹಾರ ಖಾತೆ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಭೇಟಿಯಾಗುವ ಕುರಿತು ಮಾತುಕತೆ ನಡೆದಿದೆ. ಹೈಕೋರ್ಟ್‌ನ ಚೀಫ್ ಜಸ್ಟಿಸ್ ಅವರನ್ನು ಭೇಟಿಯಾಗುವ ಉದ್ದೇಶವಿದೆ ಎಂದರು.ಹುಬ್ಬಳ್ಳಿ-ಧಾರವಾಡ, ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಲಾಗಿದೆ. ಆದರೆ ಎಲ್ಲ ರೀತಿಯ ಸಂಪರ್ಕ ವ್ಯವಸ್ಥೆ ಇರುವ ಮಂಗಳೂರನ್ನು ಕೇಂದ್ರೀಕರಿಸಿ ಇಲ್ಲಿ ಪೀಠ ಸ್ಥಾಪನೆ ಮಾಡುವುದರಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದರು.ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಿಂದ ಎಲ್ಲ ವಿಭಾಗದ ಕಕ್ಷಿದಾರರಿಗೆ ಅನುಕೂಲವಾಗಲಿದೆ. ಇದು ತ್ವರಿತ ನ್ಯಾಯದಾನ, ನ್ಯಾಯದಾನ ಮನೆಬಾಗಿಲಿಗೆ ಎನ್ನುವ ಆಶಯಗಳಿಗೆ ಪೂರಕವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net