ಹಗ್ಗಜಗ್ಗಾಟ: ಕುಂಬಳಚೇರಿ, ದಾಯನ ಚಾಂಪಿಯನ್

hagga jaggata
Published on

ಭಾಗಮಂಡಲ:

ಭಾಗಮAಡಲ ನಾಡು ಯುವ ಒಕ್ಕೂಟದ ವತಿಯಿಂದ ಶುಕ್ರವಾರ ಭಾಗಮಂಡಲದ ಶ್ರೀ ಕಾವೇರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕೊಡಗು ಗೌಡ ಹುತ್ತರಿ ಕಪ್ -2024’ ಪ್ರಥಮ ವರ್ಷದ ಹಗ್ಗಜಗ್ಗಾಟ ಪಂದ್ಯದ ಪುರುಷರ ವಿಭಾಗದಲ್ಲಿ ಕುಂಬಳಚೇರಿ ಕುಟುಂಬ ಪ್ರಥಮ ಸ್ಥಾನ ಪಡೆದುಕೊಂಡಿದೆ. ಮಹಿಳೆಯರ ವಿಭಾಗದಲ್ಲಿ ದಾಯನ ಕುಟುಂಬಸ್ಥರ ತಂಡ ವಿಜಯಿ ಆಯಿತು.

ಈ ಪಂದ್ಯಾವಳಿಯಲ್ಲಿ ಪುರಷರ 32 ಕುಟುಂಬ ತಂಡಗಳು ಪಾಲ್ಗೊಂಡಿದ್ದವು. ದ್ವಿತೀಯ ಸ್ಥಾನ ಪರ್ಲಕೋಟಿ, ತೃತೀಯ ಸ್ಥಾನ ನಿಡ್ಯಮಲೆ ಹಾಗೂ ನಾಲ್ಕನೇ ಸ್ಥಾನವವನ್ನು ಮಜಿಕೋಡಿ ಕುಟುಂಬಸ್ಥರ ತಂಡ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ 16 ಕುಟುಂಬಗಳ ತಂಡಗಳು ಭಾಗವಹಿಸಿದ್ದವು. ದ್ವಿತೀಯ ಸ್ಥಾನವನ್ನು ಅಮೆ ಮನೆ ಕುಟುಂಬಸ್ಥರ ತಂಡ, ತೃತೀಯ ಸ್ಥಾನವನ್ನು ಕುದುಪಜೆ ಹಾಗೂ ನಾಲ್ಕನೇ ಸ್ಥಾನವನ್ನು ಪೊನ್ನೇಟಿ ಕುಟುಂಬಸ್ಥರ ತಂಡ ಪಡೆದುಕೊಂಡವು.

ಇದಕ್ಕೂ ಮೊದಲು ಬೆಳಗ್ಗೆ ಭಾಗಮಂಡಲ ನಾಡು ಯುವ ಒಕ್ಕೂಟದ ಅಧ್ಯಕ್ಷ ಕಿಶೋರ್ ಕುದುಕುಳಿ ಅಧ್ಯಕ್ಷತೆಯಲ್ಲಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಿತು. ಭಾಗಮಂಡಲ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕುಂದಲ್ಪಾಡಿ ಜೆ. ದಿವಾಕರ್ ಕಾರ್ಯಕ್ರಮ ಉದ್ಘಾಟಿಸಿದರು. ಭಾಗಮಂಡಲ ಕೆವಿಜಿ ಐಟಐ ಪ್ರಾಂಶುಪಾಲ ಕುಡೆಕಲ್ ಶ್ರೀಕಾಂತ್ ಪುರುಷರ ಹಗ್ಗ ಜಗ್ಗಾಟ ಪಂದ್ಯಾವಳಿ ಉದ್ಘಾಟಿಸಿದರೆ, ಭಾಗಮಂಡಲ ಪೊಲೀಸ್ ಠಾಣಾಧಿಕಾರಿ ಶೋಭಾ ಲಮಾಣಿ ಮಹಿಳೆಯರ ಹಗ್ಗ ಜಗ್ಗಾಟ ಉದ್ಘಾಟಿಸಿದರು.

ಭಾಗಮಂಡಲ ನಾಡು ಯುವ ಒಕ್ಕೂಟದ ಉಪಾಧ್ಯಕ್ಷ ಡಾ. ಕೂಡಕಂಡಿ ದಯಾನಂದ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಕುದುಪಜೆ ಪ್ರಕಾಶ್, ಕೊಡಗು ವಿದ್ಯಾ ಸಂಘ ನಿರ್ದೇಶಕ ದೇವಂಗೋಡಿ ಹರ್ಷ, ಕಾಂಚನ ಕೆದಂಬಾಡಿ, ಭಾಗಮಂಡಲ ನಾಡು ಯುವ ಒಕ್ಕೂಟದ ಕಾರ್ಯದರ್ಶಿ ಚಲನ್ ನಿಡ್ಯಮಲೆ, ಸಹಕಾರ್ಯದರ್ಶಿ ಕೂಡಕಂಡಿ ಚೇತನ್ ಉಪಸ್ಥಿತರಿದ್ದರು.

ಪಂದ್ಯಾವಳಿ ಉದ್ದಕ್ಕೂ ವೀಕ್ಷಕ ವಿವರಣೆ ನೀಡಿದ ನಿರಂತ್ ದೇವಶ್ಯ ವಿಶೇಷವಾಗಿ ಗಮನ ಸೆಳೆದರು. ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ನಿರಂತ್ ಅವರ ಅರೆಭಾಷೆಯಲ್ಲಿನ ವೀಕ್ಷಕ ವಿವರಣೆ ಸೇರಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net