

ಹಗರಿಬೊಮ್ಮನಹಳ್ಳಿ: ತಾಲೂಕಿನ 21 ಹಳ್ಳಿಗಳಲ್ಲಿ ಪವನ ಶಕ್ತಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಕಂಪನಿಗಳು ಮುಂದೆ ಬಂದಿದ್ದು, ಈ ಯೋಜನೆಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಕೃಷಿ ಭೂಮಿ ಉಳಿವಿಗಾಗಿ ನಾವು ಸಂಘಟನೆಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್.ಕವಿತಾಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ತಾಲೂಕು ಸಂಚಾಲಕ ಬುಡ್ಡಿ ಬಸವರಾಜ ಮಾತನಾಡಿ, ತಾಲೂಕಿನಲ್ಲಿ 89 ಪವನ ಶಕ್ತಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ನೂರಾರು ಎಕರೆ ಕೃಷಿ ಭೂಮಿ ಬಳಸಿಕೊಳ್ಳುವ ಯೋಜನೆಯಿದ್ದು, ಇದಕ್ಕಾಗಿ ರೈತರಿಗೆ ಹಲವು ರೀತಿಯಲ್ಲಿ ಆಮಿಷವೊಡ್ಡುವ ಯತ್ನ ನಡೆದಿದೆ. ಇದರಿಂದ ಅಮಾಯಕ ರೈತರು ಮುಂದೆ ಬೀದಿಗೆ ಬರಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕೃಷಿ ಪದ್ಧತಿ ನಶಿಸಿ ರೈತರು ಜೀವನ ಮಾಡಲು ಪರದಾಡುವ ಸ್ಥಿತಿ ನಿರ್ಮಾಣಗೊಳ್ಳಲಿದೆ. ತಾಲೂಕಿನಲ್ಲಿ ಈಗಾಗಲೇ ಸೋಲಾರ್ ವಿದ್ಯುತ್ ಉತ್ಪಾದನೆಗಾಗಿ ಕೃಷಿ ಭೂಮಿ ಉಪಯೋಗಿಸಲಾಗುತ್ತಿದೆ. ಈಗ ಪವನ ಶಕ್ತಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಫಲವತ್ತಾದ ನೂರಾರು ಎಕರೆ ಭೂಮಿಯನ್ನು ಹದಗೆಡಿಸುವ ಯತ್ನ ನಿಲ್ಲಿಸಬೇಕು. ಇದು ಕೃಷಿಯನ್ನೇ ನಂಬಿಕೊಂಡಿರುವ ರೈತರ ಜೀವನದ ಪ್ರಶ್ನೆಯಾಗಿದೆ. ಸರ್ಕಾರ ತನ್ನ ನಿಲುವನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
ರೈತರಾದ ಹೊಸಮನಿ ಮಂಜುನಾಥ, ಬೆಣಕಲ್ಲು ಪ್ರಕಾಶ್. ನೀಲಪ್ಪ. ದುರ್ಗಜ್ಜ, ಹನುಮಂತಪ್ಪ, ಬ್ಯಾಲಾಳು ಮಂಜುನಾಥ, ಕೋಡಿಹಳ್ಳಿ ಮಂಜುನಾಥ, ರಾಮಣ್ಣ, ಹನುಮಂತಪ್ಪ, ಮಹೇಶ, ನಿಂಗರಾಜ್, ಸಂತೋಷ್, ಗೋಣಪ್ಪ, ಕೆ.ಕರಿಬಸಪ್ಪ ಇತರರಿದ್ದರು.