ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸಲ್ಲ

Hagaribommanahalli Villagers Petition to MLA KNemiraj Nayka
ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಮದ ಹತ್ತಿರ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ಶಾಸಕ ಕೆ.ನೇಮಿರಾಜ್‌ನಾಯ್ಕ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೆ.ಮಹೇಶ್ವರ, ಗ್ರಾಪಂ ಸದಸ್ಯರಾದ ಹಳ್ಳಿ ಗುಡ್ಡಪ್ಪ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಪಟ್ಟಣದ ತ್ಯಾಜ್ಯ, ಒಳಚರಂಡಿ ನೀರನ್ನು ಮಾದೂರು ಗ್ರಾಮದ ಹತ್ತಿರದ ಸರ್ಕಾರಿ ನಿವೇಶನದಲ್ಲಿ ವಿಲೇವಾರಿ ಮಾಡುವ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿ ಶಾಸಕ ಕೆ.ನೇಮಿರಾಜ್ ನಾಯ್ಕ ಅವರಿಗೆ ಗ್ರಾಮಸ್ಥರು ಗುರುವಾರ ಮನವಿ ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೆ.ಮಹೇಶ್ವರ ಮಾತನಾಡಿ, ಪಟ್ಟಣದ 23 ವಾರ್ಡ್‌ಗಳ ತ್ಯಾಜ್ಯ, ಒಳಚಂಡಿ ನೀರನ್ನು ಗ್ರಾಮದ ಪಕ್ಕದಲ್ಲಿ ವಿಲೇವಾರಿ ಮಾಡಲು ನಿವೇಶನ ಪರಿಶೀಲನೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಿದ್ದರು. ಇಲ್ಲಿನ ಒಂದು ಎಕರೆ ಜಾಗದಲ್ಲಿ ಗ್ರಾಪಂ ಆಡಳಿತ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿದ್ದಾರೆ. ಆಶ್ರಯ ಮನೆಗಳ ನಿರ್ಮಾಣಕ್ಕೆ ಮೂರು ಎಕರೆ ಕಾಯ್ದಿರಿಸಲಾಗಿದೆ. ಇದರ ಪಕ್ಕದ ಸರ್ವೆ ನಂ.266ರಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ ಪರವಾನಗಿಗೆ ಕಳಿಸಿಕೊಡಲಾಗಿದೆ. ಕೆರೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಆದ್ದರಿಂದ ನಿಗದಿತ ಸ್ಥಳದಲ್ಲಿ ತ್ಯಾಜ್ಯ ವಿಲೆವಾರಿ ಅಥವಾ ಒಳಚರಂಡಿ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡಬಾರದು. ಈ ಬಗ್ಗೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಸೀಲ್ದಾರ್ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದರು.

ಶಾಸಕ ಕೆ.ನೇಮಿರಾಜ್ ನಾಯ್ಕ ಮಾತನಾಡಿ, ಜಿಲ್ಲಾಧಿಕಾರಿಯೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಎಂದರು. ಗ್ರಾಪಂ ಸದಸ್ಯರಾದ ಹಳ್ಳಿ ಗುಡ್ಡಪ್ಪ, ಪೂಜಾರ್ ಮಲ್ಲಪ್ಪ, ಪ್ರಮುಖರಾದ ಬಣಕಾರ ಗೋಣೆಪ್ಪ, ಈಡಿಗರ ಕೊಂಡಪ್ಪ, ಅಂಗಡಿ ಮಂಜುನಾಥ, ಕಂಟಿ ಕೊಟ್ರೇಶ್, ಭೋವಿ ಹನುಮಂತಪ್ಪ, ವಾಲೀಕಾರ ದುರುಗಪ್ಪ, ಮಂಗನಹಳ್ಳಿ ಸುರೇಶ, ಸಂಗಪ್ಪ, ಮಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net