

ಹಗರಿಬೊಮ್ಮನಹಳ್ಳಿ: ತಾಲೂಕಿನ ವಿವಿಧೆಡೆ ಗುರುವಾರ ಬೆಳಗ್ಗೆ ಭಾರಿ ಮಳೆಯಾಗಿದ್ದು, ಹಳ್ಳಗಳು ತುಂಬಿ ಹರಿದಿವೆ. ಮಾದೂರು, ವಲ್ಲಾಭಾಪುರ, ಚಿಂತ್ರಪಳ್ಳಿ ರಾಯರಾಳು ತಾಂಡಾ, ದಶಮಾಪುರ, ಹಂಪಾಪಟ್ಟಣ, ಆನೇಕಲ್ಲು ತಾಂಡಾ, ಆನೇಕಲ್ಲು ಗ್ರಾಮದಲ್ಲಿ ಮಳೆಯಾಗಿದೆ. ದಶಮಾಪುರ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಹಿರೇಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿದಿದೆ. ಇದರಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಕೂಡ್ಲಿಗಿ-ಹಗರಿಬೊಮ್ಮನಹಳ್ಳಿ ಮಾರ್ಗದ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಉತ್ತಮ ಮಳೆಯಾದ್ದರಿಂದ ಚಿಂತ್ರಪಳ್ಳಿ ಕೆರೆಯತ್ತ ನೀರು ಹರಿದುಬಂತು. ಹಂಪಾಪಟ್ಟಣ ತಿಗಳನಕೆರೆಗೂ ಸ್ವಲ್ಪ ಪ್ರಮಾಣದ ನೀರು ಹರಿದು ಬಂದಿದೆ. ಪಟ್ಟಣದಲ್ಲಿ ಜಿಟಿಜಿಟಿ ಮಳೆ ಆಯಿತು.