

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದಿಂದ ಶೈಕ್ಷಣಿಕ ವರ್ಷದಿಂದ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಹಾಗೂ ಶಾಲೆಯಲ್ಲಿ ಕಿಂಡರ್ ಗಾರ್ಡನ್ ತೆರೆಯಲು ಒತ್ತಾಯಿಸಿ ವೀರಶೈವ ಸಮುದಾಯದ ಮುಖಂಡರು ಬಳ್ಳಾರಿಯಲ್ಲಿ ಸಂಘದ ಅಧ್ಯಕ್ಷ ಡಾ.ಕಣೇಕಲ್ ಮಹಾಂತೇಶಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ ಮಾತನಾಡಿ, ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯ ಸುತ್ತಲಿನ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಬಳಿಕ ದೂರದ ನಗರಗಳಿಗೆ ಹೋಗಿ ಶಿಕ್ಷಣ ಪಡೆಯಲು ಅಸಾಧ್ಯ. ಕಾರಣ ಅವರ ಅನುಕೂಲಕ್ಕಾಗಿ ವೀರಶೈವ ವಿದ್ಯಾವರ್ಧಕ ಸಂಘದಿಂದ ವಿಜ್ಞಾನ ವಿಭಾಗ ತೆರೆದರೆ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಅಲ್ಲದೆ ಶಾಲೆಯಲ್ಲಿ ಕಿಂಡರ್ ಗಾರ್ಡನ್ ತೆರೆಯಬೇಕು ಎಂದು ಒತ್ತಾಯಿಸಿದರು.