

ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳು ಯಾವುದೇ ಆಮಿಷ ಮತ್ತು ಮೋಹಕ್ಕೆ ಒಳಗಾಗದೆ ವಿದ್ಯಾಭ್ಯಾಸದ ಕಡೆಗೆ ಗಮನಕೊಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕೆ.ಮಧುಸೂದನ್ ಹೇಳಿದರು.
ಪಟ್ಟಣದ ಗಂ.ಭೀ.ಪಪೂ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಲ್ಯ ವಿವಾಹ ನಿಷೇಧ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.
ಸಿವಿಲ್ ನ್ಯಾಯಧೀಶ ಸೈಯದ್ ಮೋಹಿದ್ದೀನ್ ಮಾತನಾಡಿ, ಬಾಲ್ಯವಿವಾಹದಿಂದ ತಾಯಿ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಲಿವೆ. ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಪೋಕ್ಸೋ ಕಾಯ್ದೆಯ ನಿಯಮಗಳನ್ನು ಎಲ್ಲರೂ ಅರಿತಿರಬೇಕು. ಜೀವನದಲ್ಲಿ ಭಯ, ಆತಂಕ ಬಿಡಬೇಕು. ವೈಜ್ಞಾನಿಕ ತಳಹದಿ ಮೇಲೆ ಕಾನೂನುಗಳನ್ನು ರೂಪಿಸಿದ್ದು, ತಿಳಿದುಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ.ಎಂ.ಕೆ.ದುರುಗಪ್ಪ, ವಕೀಲರ ಸಂಘದ ಅಧ್ಯಕ್ಷ ಪಿ.ರಮೇಶ್, ಸಂಪನ್ಮೂಲ ವ್ಯಕ್ತಿ ಎಸ್.ಜಿ.ನಾಗರಾಜ, ಉಪನ್ಯಾಸಕ ಗೂಳೆಪ್ಪ ಇತರರಿದ್ದರು.