

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ದಿನೇದಿನೆ ಬೀದಿನಾಯಿಗಳ ಉಪಟಳ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಪುರಸಭೆ ಅಧ್ಯಕ್ಷ ಮರಿ ರಾಮಪ್ಪ ತಿಳಿಸಿದರು.
ಪುರಸಭೆ ಸಿಬ್ಬಂದಿ ಹಾಗೂ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೂರಪ್ಪ ಅವರೊಂದಿಗೆ ಚರ್ಚಿಸಿ ಸೋಮವಾರ ಮಾತನಾಡಿದರು. ಪಟ್ಟಣದ ಎಲ್ಲ 23 ವಾರ್ಡ್‌ಗಳಲ್ಲಿ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, , ನಿಯಂತ್ರಣಕ್ಕೆ ಕ್ರಮವಹಿಸಬೇಕು. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಒಂದು ಸಾವಿರ ಬೀದಿನಾಯಿಗಳನ್ನು ಗುರಿಯಾಗಿಸಿಕೊಂಡು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎಂದರು.
ಬೀದಿನಾಯಿಗಳನ್ನು ಹಿಡಿಯಲು ಒಂದೆರಡು ಬಾರಿ ಟೆಂಡರ್ ಕರೆದರೂ ಯಾರೂ ಬರಲಿಲ್ಲ. ಆದ್ದರಿಂದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದೆ ಎಂದು ಮರಿ ರಾಮಪ್ಪ ತಿಳಿಸಿದರು. ಡಾ.ಸೂರಪ್ಪ ಮಾತನಾಡಿ, ಒಂದು ಬಾರಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.
ಹಗರಿಬೊಮ್ಮನಹಳ್ಳಿಯಲ್ಲಿ ಬೀದಿನಾಯಿ ಗಳ ಹಾವಳಿ ಶೀರ್ಷಿಕೆಯಡಿ ಜ.4ರಂದು ವರದಿ ಪ್ರಕಟ ವಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್, ನಾಮನಿರ್ದೇಶಿತ ಸದಸ್ಯ ಬಾಳಪ್ಪ, ಪರಿಸರ ನಿಯಂತ್ರಣಾಧಿಕಾರಿ ಜಗದೀಶ್ ಹಿರೇಮಠ, ಪುರಸಭೆ ಸದಸ್ಯ ರಾಜೇಶ್ ಬ್ಯಾಡ್ಗಿ, ಪ್ರಮುಖರಾದ ಎಚ್.ಎಂ. ವಿಜಯಕುಮಾರ್, ಗುಂಡ್ರ ಹನುಮಂತಪ್ಪ, ಸೆರೆಗಾರ ಹುಚ್ಚಪ್ಪ, ಸಿಖಂದರ್ ಇತರರಿದ್ದರು.