ಭತ್ತದ ಪೈರು ನೆಲದ ಪಾಲು

Hagaribommanahalli pady crop loss
ಬಾಚಿಗೊಂಡನಹಳ್ಳಿಯಲ್ಲಿ ಕಟಾವಿಗೆ ಬಂದಿದ್ದ ಭತ್ತ ನೆಲದ ಪಾಲಾಗಿರುವುದು.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಕೆಲವೆಡೆ ಸೋಮವಾರ ಸಂಜೆ ಸುರಿದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಬಾಚಿಗೊಂಡನಹಳ್ಳಿ ಗ್ರಾಮದಲ್ಲಿ ಭತ್ತದ ಗದ್ದೆಗೆ ನೀರು ನುಗ್ಗಿದ ಪರಿಣಾಮ ಕೊಯ್ಲಿಗೆ ಬಂದಿದ್ದ ಪೈರು ನೆಲದ ಪಾಲಾಗಿದೆ.

ಪಟ್ಟಣ ಹಾಗೂ ಹನಸಿ, ಬೆಣಕಲ್ಲು, ಉಪ್ಪಾರಗಟ್ಟಿ, ಮಾದೂರು, ಪಿಲ್ಲೋಬನಹಳ್ಳಿ, ಕಡಲಬಾಳು, ಬ್ಯಾಲಾಳ್, ಮುಟುಗನಹಳ್ಳಿ, ಹಗರಿ ಕ್ಯಾದಿಗಿಹಳ್ಳಿ, ಬಾಚಿಗೊಂಡನಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದೆ. ಬಾಚಿಗೊಂಡನಹಳ್ಳಿಯಲ್ಲಿ ಭತ್ತದ ಗದ್ದೆಗೆ ನುಗ್ಗಿದ ನೀರನ್ನು ಹೊರ ಹಾಕಲು ರೈತರು ಪ್ರಯತ್ನಿಸಿದರು.

ಸಿಡಿಲಿನಿಂದ ಮಹಿಳೆಯರಿಬ್ಬರು ಅಸ್ವಸ್ಥ

ಬಾಚಿಗೊಂಡನಹಳ್ಳಿ ಎರಡನೇ ಕಾಲನಿಯಲ್ಲಿ ಕೃಷಿ ಕೆಲಸಕ್ಕೆ ತೆರಳಿದ್ದ ಇಬ್ಬರು ಮಹಿಳೆಯರ ಹತ್ತಿರದಲ್ಲಿಯೇ ಸಿಡಿಲು ಬಡಿದಿದೆ. ಪರಿಣಾಮ ಮಹಿಳೆಯರಿಬ್ಬರು ಕುಸಿದು ಬಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಮನಮ್ಮ ಮಾರುತಿ ಹಾಗೂ ಮರಿಯಮ್ಮ ಅಸ್ವಸ್ಥರಾಗಿದ್ದು, ಇಬ್ಬರನ್ನೂ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಮರಿಯಮ್ಮ ಅವರನ್ನು ಕೊಪ್ಪಳ ಜಿಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಪ್ರವೀಣ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net