ಹಗರಿಬೊಮ್ಮನಹಳ್ಳಿಯಲ್ಲಿ ಬೀದಿನಾಯಿಗಳ ಹಾವಳಿ

Hagaribommanahalli dogs
ಹಗರಿಬೊಮ್ಮನಹಳ್ಳಿಯಲ್ಲಿ ರಸ್ತೆಯಲ್ಲಿ ಬೀದಿ ನಾಯಿಗಳು ಜಮಾಯಿಸಿರುವುದು.
Published on

ವಿಶ್ವನಾಥ ಬಾವಿಕಟ್ಟಿ

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಸಾರ್ವಜನಿಕರು ಬೀದಿನಾಯಿಗಳನ್ನು ಕಂಡರೆ ಭಯಪಡುತ್ತಿದ್ದಾರೆ. ವಾಹನಗಳಿಗೆ ಅಡ್ಡಾದಿಡ್ಡಿ ಬರುತ್ತಿರುವ ನಾಯಿಗಳು ಅಪಘಾತದ ಭೀತಿಯನ್ನೂ ಹುಟ್ಟಿಸಿವೆ. ಮಕ್ಕಳ ಮೇಲೆ ದಾಳಿ ಮಾಡುತ್ತಿರುವುದರಿಂದ ಪಾಲಕರು ಭಯಪಡುವಂತಾಗಿದೆ.

ಪಟ್ಟಣದ ಎಲ್ಲ 23ವಾರ್ಡ್‌ಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಗುಂಪಾಗಿ ಓಡಾಡುತ್ತಿರುವ ನಾಯಿಗಳನ್ನು ಕಂಡು ಜನರು ಭಯಪಡುವಂತಾಗಿದೆ. ದಿಢೀರನೆ ವಾಹನ ಹಾಗೂ ಸಾರ್ವಜನಿಕರ ಮೈಮೇಲೆರಗುತ್ತಿವೆ. ಇದರಿಂದಾಗಿ ಸಾರ್ವಜನಿಕರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಾಯಿಗಳ ನಿಯಂತ್ರಣಕ್ಕೆ ಪುರಸಭೆಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಜನರು ರಸ್ತೆಯಲ್ಲಿ ಓಡಾಡಲು, ವಿದ್ಯಾರ್ಥಿಗಳು ಶಾಲೆ, ಕಾಲೇಜ್‌ಗೆ ತೆರಳಲು, ಮಕ್ಕಳು ಮನೆಯ ಅಂಗಳಲ್ಲಿ ಆಟವಾಡಲು ತೊಂದರೆ ಎದುರಿಸುವಂತಾಗಿದೆ. ಪೇಪರ್ ಹಾಗೂ ಹಾಲು ವಿತರಿಕರು ಭಯದಿಂದ ಕರ್ತವ್ಯ ನಿರ್ವಹಿಸುವಂತಾಗಿದೆ. ಚಿಕನ್ ಅಂಗಡಿ, ಎಗ್‌ರೈಸ್ ಬಂಡಿಗಳ ಬಳಿ ನಾಯಿಗಳ ಹಾವಳಿ ಇನ್ನೂ ಹೆಚ್ಚಿದೆ.

ಈಗಾಗಲೇ 150ಕ್ಕೂ ಹೆಚ್ಚು ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಾಯಿಗಳನ್ನು ಹಿಡಿಯಲು ಟೆಂಡರ್ ಕೂಡ ಕರೆಯಲಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಶೀಘ್ರ ಕ್ರಮವಹಿಸಲಾಗುವುದು. | ಪ್ರಭಾಕರ ಎಂ.ಪಾಟೀಲ್ ಪುರಸಭೆ ಮುಖ್ಯಾಧಿಕಾರಿ, ಹಗರಿಬೊಮ್ಮನಹಳ್ಳಿ ನಾನು ಪುರಸಭೆ ಅಧ್ಯಕ್ಷನಾಗಿದ್ದಾಗ ಸಾರ್ವಜನಿಕರ ದೂರಿನ ಮೇರೆಗೆ ಬೀದಿನಾಯಿಗಳನ್ನು ಅರಣ್ಯಕ್ಕೆ ಸಾಗಿಸಲಾಗಿತ್ತು. ಇದೀಗ ಬೀದಿನಾಯಿಗಳ ಹಾವಳಿ ಮತ್ತೆ ಹೆಚ್ಚಾಗುತ್ತಿದೆ. ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಯಿಂದ ಬೀದಿ ನಾಯಿಗಳ ನಿಯಂತ್ರಣ ಸಾಧ್ಯ. | ಟಿ.ರಾಘವೇಂದ್ರ ಪುರಸಭೆ ಮಾಜಿ ಅಧ್ಯಕ್ಷ, ಹಗರಿಬೊಮ್ಮನಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ 2024ರಲ್ಲಿ ನಾಯಿ ಕಡಿತದಿಂದ 1175 ಜನರು ಚಿಕಿತ್ಸೆಗೆ ಬಂದಿದ್ದರು. ಈ ಪೈಕಿ ಶೇ.10 ಜನರಿಗೆ ತೀವ್ರ ಗಾಯಗಳಾಗಿದ್ದವು. ಯಾವುದೇ ಜೀವಹಾನಿಯಾಗಿಲ್ಲ. ಬೀದಿನಾಯಿಗಳ ಹಾವಳಿ ನಿಯಂತ್ರಣ ಅನಿವಾರ್ಯವಾಗಿದೆ. | ಡಾ.ಅಚ್ಯುತ್ ರಾಯ್ ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ, ಹಗರಿಬೊಮ್ಮನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net