ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ರಾಜೀನಾಮೆ ನೀಡಲಿ

hbh-1
ರಾಜ್ಯ ಪ.ಜಾ. ಮತ್ತು ಪ.ಪಂ. ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ರಾಜೀನಾಮೆಗೆ ಆಗ್ರಹಿಸಿ ಜನಜಾಗೃತಿ ಸೇವಾ ಸಂಘದ ತಾಲೂಕು ಘಟಕದಿಂದ ಹಗರಿಬೊಮ್ಮನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಬುಡ್ಗ ಜಂಗಮ ಸಮಾಜದ ರಾಜ್ಯಾಧ್ಯಕ್ಷ ಸಣ್ಣ ಮಾರೆಪ್ಪ, ಜಿಲ್ಲಾ ಗೌರವಾಧ್ಯಕ್ಷ ವಿ.ಮಲ್ಲೇಶಪ್ಪ, ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ ಇನ್ನಿತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ರಾಜ್ಯ ಪ.ಜಾತಿ ಮತ್ತು ಪ.ಪಂ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹಾಗೂ ಆಪ್ತ ಕಾರ್ಯದರ್ಶಿ ಆನಂದಕುಮಾರ ಏಕಲವ್ಯ ಅವರು ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಮೇಲೆ ನಡೆಸಿರುವ ದೌರ್ಜನ್ಯ ಖಂಡಿಸಿ ಪಟ್ಟಣದ ಬಸವೇಶ್ವರ ಪುತ್ಥಳಿ ಬಳಿ ಅಲೆಮಾರಿ, ಅರೆ ಅಲೆಮಾರಿ, ಪ.ಜಾ. ಅಭಿವೃದ್ಧಿ ಜನಜಾಗೃತಿ ಸೇವಾ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಬುಡ್ಗ ಜಂಗಮ ಸಮಾಜದ ರಾಜ್ಯಾಧ್ಯಕ್ಷ ಸಣ್ಣ ಮಾರೆಪ್ಪ ಮಾತನಾಡಿ, ಮಾಜಿ ಸಚಿವ ಎಚ್.ಆಂಜನೇಯ ಅವರ ನೇತೃತ್ವದಲ್ಲಿ ಅಲೆಮಾರಿ ಸಮುದಾಯದ ರಾಜ್ಯ ಸಮ್ಮೇಳನ ನಡೆಯುತ್ತಿದ್ದ ಸ್ಥಳಕ್ಕಾಗಮಿಸಿದ, ನಿಗಮದ ಅಧ್ಯಕ್ಷೆ ಮತ್ತು ಬೆಂಬಲಿಗರು ಏಕಾಏಕಿ ದೌರ್ಜನ್ಯ ನಡೆಸಿದ್ದಲ್ಲದೆ, ಕಾರ್ಯಕ್ರಮ ಆಯೋಜಕರ ಮೇಲೆ ದೂರು ನೀಡಿರುವ ಹೀನ ನಡವಳಿಕೆ ಖಂಡನೀಯ. ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬುಡ್ಗ ಜಂಗಮ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿ.ಮಲ್ಲೇಶಪ್ಪ ಮಾತನಾಡಿ, ಜವಾಬ್ದಾರಿ ಸ್ಥಾನದಲ್ಲಿರುವ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರ ಈ ರೀತಿಯ ವರ್ತನೆ ಸರಿಯಲ್ಲ. ಅವರು ರಾಜೀನಾಮೆ ನೀಡಬೇಕು. ಆಪ್ತ ಕಾರ್ಯದರ್ಶಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ರಾಮನಗರದ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ಬಜಾರವರೆಗೂ ಪ್ರತಿಭಟಣಾ ಮೆರವಣಿಗೆ ಮಾಡಲಾಯಿತು. ಬಳಿಕ ಉಪ ತಹಸೀಲ್ದಾರ್ ಶಿವಕುಮಾರಗೌಡ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಗೆ ಡಾ.ಬಿ.ಆರ್.ಅಂಬೇಡ್ಕರ್ ಸಂಘದಿಂದ ಬೆಂಬಲ ಸೂಚಿಸಲಾಯಿತು.

ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ, ಜನಜಾಗೃತಿ ಸೇವಾ ಸಂಘದ ತಾಲೂಕು ಅಧ್ಯಕ್ಷ ಎಸ್.ಬಿ.ಮಂಜುನಾಥ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ಎಚ್.ದೊಡ್ಡಬಸಪ್ಪ, ಸುಡುಗಾಡು ಸಿದ್ಧರ ಸಂಘದ ಸಣ್ಣ ಅಜ್ಜಯ್ಯ, ಪ್ರಮುಖರಾದ ಮಾದೂರು ಮಹೇಶ, ವೈ.ಹನುಮಂತ, ಎಸ್.ಎಸ್.ಆನಂದ, ಆನೇಕಲ್ ಲಿಂಗರಾಜ್, ವೀರೇಶ, ಕೆ.ತಿಪ್ಪೇಸ್ವಾಮಿ, ಶಂಕರಪ್ಪ, ಎಸ್.ಬಿ.ಗೋಣೆಪ್ಪ ಬಸವರಾಜ, ಬಿ.ಜಿ.ಹಳ್ಳಿ ಮಹೇಶ, ಅರ್ಜುನ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net