

ಹಗರಿಬೊಮ್ಮನಹಳ್ಳಿ: ನೀರಿನ ಮಟ್ಟ ಹೆಚ್ಚಾಗಿರುವುದರಿಂದ ನದಿಗೆ ಬಳಿ ಜನರು ಹೋಗಬಾರದು ಎಂದು ಜಿಪಂ ಉಪಕಾರ್ಯದರ್ಶಿ, ಎಚ್‌ಬಿ ಹಳ್ಳಿ ತಾಲೂಕು ನೋಡಲ್ ಅಧಿಕಾರಿ ಭೀಮಪ್ಪ ಲಾಳಿ ಹೇಳಿದರು.
ತಾಲೂಕಿನ ಮುತ್ಕೂರು ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಬುಧವಾರ ಮಾತನಾಡಿದರು. ತುಂಗಭದ್ರಾ ನದಿಯಲ್ಲಿ ಪ್ರವಾಹ ಭೀತಿ ಉಂಟಾಗಿರುವುದರಿಂದ ಮೀನು ಹಿಡಿಯಬಾರದು. ಪರಿಸ್ಥಿತಿಗೆ ಅನುಗುಣವಾಗಿ ನೀರಿನ ಮಟ್ಟ ಹೆಚ್ಚಾದರೆ ಸರ್ಕಾರದಿಂದ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮಸ್ಥರು ಊರುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಅಧಿಕಾರಿಗೆ ಮನವಿ ಸಲ್ಲಿಸಿದರು.
ಆನಂತರ ಕಿತ್ನೂರು ಗ್ರಾಮದ ಸ.ಹಿ.ಪ್ರಾ.ಶಾಲೆಗೆ ಅಧಿಕಾರಿ ಭೀಮಪ್ಪ ಲಾಳಿ ಅವರು ಭೇಟಿ ನೀಡಿ, ಪ್ರಗತಿಯಲ್ಲಿರುವ ಶಾಲಾ ಶೌಚಗೃಹ, ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು. ಬಾಚಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಅಡವಿ ಆನಂದೇವನಹಳ್ಳಿ ಗ್ರಾಮದಲ್ಲಿರುವ ಶಾಲಾ ಶೌಚಗೃಹ, ವೈಯಕ್ತಿಕ ದನದ ಕೊಟ್ಟಿಗೆ ಕಾಮಗಾರಿಗಳನ್ನು ಪರಿಶೀಲಿಸಿದರು.
ಮಧ್ಯಾಹ್ನ ತಾ.ಪಂ ಸಭಾಂಗಣದಲ್ಲಿ ಎಲ್ಲ ಅನುಷ್ಠಾನ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ತಾಪಂ ಇಒ ಜಿ.ಪರಮೇಶ್ವರ, ಮುತ್ಕೂರು ಗ್ರಾಪಂ ಪಿಡಿಒ ಸಿ.ಎಂ.ರೇವಣಸಿದ್ದಯ್ಯ, ತಂಬ್ರಹಳ್ಳಿ ಪಿಡಿಒ ಕೃಷ್ಣಮೂರ್ತಿ, ಮಾಹಿತಿ ಶಿಕ್ಷಕ ಸಂವಹನ ಸಂಯೋಜಕ ಕೆ.ವಿಷ್ಣುವರ್ಧನ ತಾಂತ್ರಿಕ ಸಹಾಯಕ ಗಣೇಶ್ ಇದ್ದರು.