

ಹಗರಿಬೊಮ್ಮನಹಳ್ಳಿ: ಸ್ಥಳೀಯ ಕಾಂಗ್ರೆಸ್ ಶಾಸಕ ಭೀಮಾನಾಯ್ಕರು ಶನಿವಾರ ನಡೆದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ವೇಳೆ ಬಹಿರಂಗವಾಗಿ ‘ಬಾ ಲೇ.. ಮಗನೆ’ ಎಂದು ಸವಾಲು ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಜಿದ್ದಾಜಿದ್ದಿ ಹೋರಾಟ, ಕಾರ್ಯಕರ್ತರ ಮಧ್ಯೆ ಜಟಾಪಟಿ ಏರ್ಪಟಿತ್ತು. ಮತದಾನ ಸಂದರ್ಭ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಯೂ ನಡೆದಿತ್ತು. ಈ ವೇಳೆ ಶಾಸಕ ಭೀಮಾನಾಯ್ಕ ತೋಳುತಟ್ಟಿಕೊಳ್ಳುತ್ತಾ ‘ಬಾ ಲೇ.. ಮಗನೇ’ ಎಂದು ಅಬ್ಬರಿಸಿರುವ ವಿಡಿಯೋ ಹೊರಬಿದ್ದಿದ್ದು ಭಾರಿ ಸಂಚಲನ ಮೂಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕ್ಷೇತ್ರದಲ್ಲಿ ಭೀಮಾನಾಯ್ಕ ಹಾಗೂ ಮಾಜಿ ಶಾಸಕ ನೇಮಿರಾಜನಾಯ್ಕ ನಡುವಿನ ರಾಜಕೀಯ ಜಿದ್ದಾಜಿದ್ದಿ ವೈಯಕ್ತಿಕ ಹಂತಕ್ಕೂ ತಲುಪಿರುವುದು ಗುಟ್ಟಾಗಿ ಉಳಿದಿಲ್ಲ. ಇದಾರಿಂದಾಗಿ ಭೀಮಾನಾಯ್ಕ ವಿಡಿಯೋದಲ್ಲಿ ಮೇಲಿನಂತೆ ಉದ್ಘರಿಸಿದ್ದು ಯಾರಿಗೆ ಎಂಬ ಪ್ರಶ್ನೆ ಎದ್ದಿದೆ. ಅಷ್ಟಲ್ಲದೇ ಭೀಮಾನಾಯ್ಕರ ಪುತ್ರ ಅಶೋಕ ನಾಯ್ಕ ಸಹ ತನ್ನ ತಂದೆಯ ರೋಷವೇಷಕ್ಕೆ ಬೆಂಬಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದೂ ಚರ್ಚೆಗೆ ಗ್ರಾಸವಾಗಿದೆ.
ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಶಾಸಕ ಭೀಮಾನಾಯ್ಕ ಕಾಂಗ್ರೆಸ್ ಸದಸ್ಯರನ್ನು ಕಾರಲ್ಲಿ ಕೂರಿಸಿಕೊಂಡು ಪುರಸಭೆ ಆವರಣ ಪ್ರವೇಶ ಮಾಡಿದ್ದಾರೆ. ಶಾಸಕರ ನಡೆಯನ್ನು ಬಿಜೆಪಿ ಸದಸ್ಯರು ಪ್ರಶ್ನಿಸಿದ ಬಳಿಕ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಭೀಮಾನಾಯ್ಕ ಸವಾಲು ಹಾಕಿದ್ದಾರೆ. ದರ್ಪ ತೋರಿಸಿರುವ ಶಾಸಕರ ಘನತೆ ಏನು ಎಂಬುದು ಗೊತ್ತಾಗಿದೆ | ಶ್ರೀರಾಮುಲು ಸಮಾಜ ಕಲ್ಯಾಣ ಸಚಿವ